ಆನೇಕಲ್ ತಾಲ್ಲೂಕಿನ ಚಿಂತಲಮಡಿವಾಳ ಗ್ರಾಮದ ಮಹಿಳೆಯೊಬ್ಬರಿಗೆ ಸೇರಿದ 14 ಗುಂಟೆ ಜಾಗವನ್ನು ಅಕ್ರಮವಾಗಿ ಕಬಳಿಸುವ ಉದ್ದೇಶದಿಂದ ನ್ಯಾಯಾಧೀಶರು, ಜಮೀನಿನ ಮಾಲೀಕ ಮಹಿಳೆ ಹಾಗೂ ಅವರ ಮಕ್ಕಳ ಸಹಿಗಳನ್ನು ನಕಲು ಮಾಡಿದ ಆರೋಪದಡಿ ಏಳು ಮಂದಿಯ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಒಟ್ಟು 16 ಸಹಿಗಳನ್ನು ನಕಲಿ ಮಾಡಿ ವಂಚನೆ ನಡೆಸಲಾಗಿದೆ ಎಂಬುದು ದೂರಿನಲ್ಲಿ ಉಲ್ಲೇಖವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಸಹಿ ನಕಲು ಮಾಡಲು ಕೈಜೋಡಿಸಿದ ಆರು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ಕೋರಮಂಗಲದ ಮುನಿರಾಜ ರಾಘವ ಅಲಿಯಾಸ್ ಮುರಾರಿ ಮುನೇಶ್ವರ ರಾವ್. ನಕಲಿ ದಾಖಲೆ ಸೃಷ್ಟಿಸಲು ಆಂಜಿನಪ್ಪ, ಅರುಣಾಕ್ಷಿ, ಪವಿತ್ರ, ಪೂಜಾರಿ ಮತ್ತು ಸುಶ್ಮಿತಾ ಸಹಕರಿಸಿದ್ದಾರೆ ಎನ್ನಲಾಗಿದೆ. ಚಿಂತಲಮಡಿವಾಳ ಗ್ರಾಮದ ಸರ್ವೆ ನಂಬರ್ 43/2ರ 28.8 ಎಕರೆ ಜಮೀನಿನ ಪೈಕಿ 14 ಗುಂಟೆ ಜಾಗವನ್ನು ನಕಲಿ ಸಹಿ ಹಾಗೂ ನಕಲಿ ದಾಖಲೆಗಳ ಮೂಲಕ ಕಬಳಿಸಲಾಗಿದೆ.
ಜಮೀನಿನ ಮೂಲ ಮಾಲೀಕ ವೆಂಕಟಸ್ವಾಮಿ ನಿಧನರಾಗಿದ್ದು, ಅವರ ಪತ್ನಿ ಜ್ಯೋತಮ್ಮ ಅವರ ಹೆಸರಿಗೆ ದಾಖಲೆಗಳನ್ನು ಮಾಡಿಕೊಡುತ್ತೇವೆ ಎಂದು ಸಂಬಂಧಿಯಾದ ಮುನಿ ರಾಘವ ಹಾಗೂ ತಂಡವು ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಧೀಶರ ನಕಲಿ ಸಹಿಯನ್ನು ಬಳಸಿಕೊಂಡು ಡಿಕ್ರಿ ಪಡೆದು, ಅತ್ತಿಬೆಲೆಯ ಉಪ ನೋಂದಣಿ ಕಚೇರಿಯಲ್ಲಿ ಮುನಿರಾಜ ರಾಘವ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡು ನಂತರ ಶಿವಪ್ರಸಾದ್ ಎಂಬಾತನಿಗೆ ಜಮೀನನ್ನು ಮಾರಾಟ ಮಾಡಿದ್ದಾರೆ. ವಿಷಯ ಬೆಳಕಿಗೆ ಬಂದ ಬಳಿಕ ಜ್ಯೋತಮ್ಮ ಮತ್ತು ಕುಟುಂಬದವರು ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಸಂಬಂಧಿಯಿಂದಲೇ ಮೋಸವಾಗಿದೆ ಎಂದು ಜ್ಯೋತಮ್ಮ ಆರೋಪಿಸಿದ್ದು, ನಮ್ಮ ಜಮೀನಿನ ಭಾಗವನ್ನು ಕೊಡುತ್ತೇವೆಂದು ವಂಚಿಸಲಾಗಿದೆ ಎಂದಿದ್ದಾರೆ. ಇದೇ ಜಾಗದಲ್ಲಿ ತಮ್ಮ ಪತಿಯ ಸಮಾಧಿ ಇದ್ದು, ಆರೋಪಿಗಳು ಕಬಳಿಸಿದ ಜಮೀನನ್ನು ಹಿಂದಿರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಪೂರ್ವಿಕರ ಸಮಾಧಿಗಳನ್ನು ಜೆಸಿಬಿ ಮೂಲಕ ಧ್ವಂಸ ಮಾಡಿರುವುದಾಗಿ ಹಾಗೂ ನಕಲಿ ದಾಖಲೆಗಳ ಮೂಲಕ ಜಮೀನನ್ನು ಮಾರಾಟ ಮಾಡಿರುವುದಾಗಿ ದೂರಿದ್ದಾರೆ.






