ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ ಮತ್ತೊಮ್ಮೆ ತನ್ನ ಅಚ್ಚರಿಯ ಇತಿಹಾಸವನ್ನು ಬಹಿರಂಗಪಡಿಸಿದೆ. ಇಲ್ಲಿನ ಕುಂಬಾರ ಓಣಿಯಲ್ಲಿರುವ ಚೌಕಿಮಠ ಕುಟುಂಬದ ಮನೆಯೊಂದರ ಹಾಲ್ ಪಕ್ಕದಲ್ಲೇ 10ನೇ ಶತಮಾನದ ಪುರಾತನ ಈಶ್ವರನ ಗರ್ಭಗುಡಿ ಪತ್ತೆಯಾಗಿದ್ದು, ಇತಿಹಾಸ ಪ್ರೇಮಿಗಳಲ್ಲಿ ಅಪಾರ ಕುತೂಹಲ ಮೂಡಿಸಿದೆ.
ಇದನ್ನು ಓದಿ: ಬೆಂಗಳೂರು: ಮಹಿಳೆಯರ ಒಳ ಉಡುಪು ಕದಿಸಿರುವ ವಿಕೃತಿ ಕಾಮಿ
ಇದನ್ನು ಓದಿ: ಗದಗ: ಲಕ್ಕುಂಡಿ ಗ್ರಾಮದಲ್ಲಿ ಮನೆ ಕಟ್ಟಲು ಅಗೆತ ನಡೆಸುವಾಗ 470 ಗ್ರಾಂ ಬಂಗಾರದ ಆಭರಣಗಳು ನಿಧಿ ಪತ್ತೆ..!
ಹೊರನೋಟಕ್ಕೆ ಸಾಮಾನ್ಯ ಮನೆಗೆ ಹೋಲುವ ಈ ನಿವಾಸದ ಒಳಭಾಗ ಮಾತ್ರ ವಿಶಿಷ್ಟ ಪುರಾತನತೆಯನ್ನು ತನ್ನೊಳಗೆ ಸಂರಕ್ಷಿಸಿಕೊಂಡಿದೆ. ಮನೆಯ ಅಂಗಳಕ್ಕೆ ಪ್ರವೇಶಿಸಿದ ತಕ್ಷಣ ಸುಂದರ ಮಂಟಪ ಮತ್ತು ಮಹಾಂತೇಶ್ವರ ದೇವರ ಮೂರ್ತಿ ಕಣ್ಮನ ಸೆಳೆಯುತ್ತದೆ. ಇನ್ನಷ್ಟು ಅಚ್ಚರಿಯ ಸಂಗತಿಯೆಂದರೆ, ಕುಟುಂಬದ ಸದಸ್ಯರು ದಿನನಿತ್ಯ ಓಡಾಡುವ ಹಾಲ್ಗೆ ತಟ್ಟಿಕೊಂಡಂತೆ ಪುರಾತನ ಈಶ್ವರನ ಗರ್ಭಗುಡಿ ಅಸ್ತಿತ್ವದಲ್ಲಿದೆ.
ಚೌಕಿಮಠ ಕುಟುಂಬದವರು ಕಳೆದ ನಾಲ್ಕು ತಲೆಮಾರುಗಳಿಂದ ಈ ಮನೆಯಲ್ಲಿ ವಾಸಿಸುತ್ತಿದ್ದು, ಸುಮಾರು 10ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಸ್ಥಾನದ ಆವರಣವನ್ನೇ ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾರೆ. ಪುರಾತನ ಕೆತ್ತನೆಗಳಿರುವ ಸ್ತಂಭಗಳು ಮತ್ತು ಕಲ್ಲಿನ ಗೋಡೆಗಳ ನಡುವೆ ಇವರ ದೈನಂದಿನ ಜೀವನ ಸಾಗುತ್ತಿದ್ದು, ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಈ ಅಪರೂಪದ ಪರಂಪರೆಯನ್ನು ಅವರು ನಿಷ್ಠೆಯಿಂದ ಕಾಪಾಡಿಕೊಂಡಿದ್ದಾರೆ.
ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆಯ ಉತ್ಖನನ ಕಾರ್ಯ ಇತ್ತೀಚೆಗೆ ಚುರುಕುಗೊಂಡಿರುವ ಸಂದರ್ಭದಲ್ಲಿ, ಈ ‘ಮನೆ-ಮಂದಿರ’ದ ವಿಚಾರ ಮತ್ತಷ್ಟು ಮಹತ್ವ ಪಡೆದಿದೆ. ಹಳೆಯ ಚಾಲುಕ್ಯ ಶೈಲಿಯ ವಾಸ್ತುಶಿಲ್ಪ ಮತ್ತು ಆಧುನಿಕ ಜೀವನಶೈಲಿ ಒಂದೇ ಸೂರಿನಡಿ ಬೆರೆತಿರುವುದು ಲಕ್ಕುಂಡಿಯ ವಿಶಿಷ್ಟತೆ. 10ನೇ ಶತಮಾನದ ಕೆತ್ತನೆಗಳು ಇಂದಿಗೂ ಉತ್ತಮ ಸ್ಥಿತಿಯಲ್ಲಿ ಉಳಿದಿದ್ದು, ಇತಿಹಾಸಾಸಕ್ತರನ್ನು ಕೈಬೀಸಿ ಕರೆಯುತ್ತಿವೆ.






