ಅನನ್ಯಾ ಭಟ್ ನಾಪತ್ತೆ ಪ್ರಕರಣದ ವಿವರ ನೀಡುವಂತೆ ಸುಜಾತಾ ಭಟ್ ಅವರಿಗೆ ಎಸ್ಐಟಿಯಿಂದ ನೋಟಿಸ್ ನೀಡಲಾಗಿದೆ. ಕೇಸ್ ವಾಪಸ್ ಪಡೆಯುವುದಾಗಿ ಸುಜಾತಾ ಭಟ್ ಹೇಳಿದ್ದಾರೆ. ಆದರೆ ಕೇಸ್ ಹಿಂಪಡೆಯುವ ಬಗ್ಗೆ ಎಸ್ಐಟಿಗೆ ಸುಜಾತಾ ಭಟ್ ತಿಳಿಸಿಲ್ಲ ಎನ್ನಲಾಗಿದೆ.
ನನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳಕ್ಕೆ ಹೋಗಿದ್ದ ವೇಳೆ ನಾಪತ್ತೆಯಾಗಿರುವುದಾಗಿ ಸುಜಾತಾ ಭಟ್ ದೂರು ನೀಡಿದ್ದರು. ತಮ್ಮ ಪುತ್ರಿಯ ಫೋಟೋವನ್ನು ಕೂಡ ತೋರಿಸಿದ್ದರು. ಆದರೆ ಸುಜಾತಾ ಭಟ್ ಮದುವೆಯಾಗಿಲ್ಲ, ಮಕ್ಕಳು ಕೂಡ ಇಲ್ಲವೆಂದು ಅವರ ಸಹೋದರ ಸ್ಪೋಟಕ ಹೇಳಿಕೆ ನೀಡಿದ್ದರು. ಈ ನಡುವೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸುಜಾತಾ ಭಟ್ ವಿರುದ್ಧ ದೂರು ನೀಡಿದ್ದಾರೆ. ಅನನ್ಯ ಭಟ್ ನಾಪತ್ತೆ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್ಐಟಿಗೆ ವಹಿಸಿದೆ. ಇದರ ಬೆನ್ನಲ್ಲೇ ವಿಚಾರಣೆಗೆ ಹಾಜರಾಗಲು ಸುಜಾತಾ ಭಟ್ ಗೆ ತಿಳಿಸಲಾಗಿದ್ದು, ಅವರು ಕೇಸ್ ವಾಪಸ್ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸುಜಾತಾ ತೋರಿಸಿರುವ ಫೋಟೋ ನನ್ನ ತಂಗಿಯ ಫೋಟೋ ಎಂದು ತಿಳಿಸಿದ್ದರು. ಆದರೆ ಅದು ಅನನ್ಯಾ ಭಟ್ ಅಲ್ಲ, ಬದಲಿಗೆ ವಾಸಂತಿ ಎಂಬ ಆರೋಪಗಳು ಕೇಳಿಬಂದಿದ್ದವು. ಹೀಗಿರುವಾಗಲೇ ಕೇಸ್ ವಾಪಸ್ ಪಡೆಯುವುದಾಗಿ ಸುಜಾತಾ ಭಟ್ ಹೇಳಿದ್ದು, ಅವರ ಈ ನಡೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಅನನ್ಯಾ ಭಟ್ ಪ್ರಕರಣವನ್ನು ಎಸ್ಐಟಿ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಪ್ರಕರಣದ ವಿವರ ನೀಡುವಂತೆ ಸುಜಾತಾ ಭಟ್ಗೆ ನೋಟಿಸ್ ನೀಡಿದೆ. ಆದರೆ ಎಸ್ಐಟಿ ನೋಟಿಸ್ಗೆ ಉತ್ತರಿಸದ ಸುಜಾತಾ ಭಟ್, ಅವರದ್ದೇ ಎನ್ನಲಾದ ಆಡಿಯೋ ಹರಿಬಿಟ್ಟು ಕೇಸ್ ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ. ಆದರೆ ಕೇಸ್ ಹಿಂಪಡೆಯುವ ಬಗ್ಗೆ ಎಸ್ಐಟಿಗೆ ಹೇಳಿಲ್ಲವೆಂದು ಎಸ್ಐಟಿ ಮೂಲಗಳಿಂದ ತಿಳಿದುಬಂದಿದೆ.
ಈಗಾಗಲೇ ಕೇಸ್ ಬಗ್ಗೆ ಒಂದು ಹಂತದ ಮಾಹಿತಿ ಪಡೆದಿರುವ ಎಸ್ಐಟಿ, ಸುಜಾತಾ ಭಟ್ ಹಿನ್ನೆಲೆ, ಕುಟುಂಬದ ಮಾಹಿತಿ, 2003ರಲ್ಲಿ ಅನನ್ಯಾ ಭಟ್ ಕಾಣೆಯಾಗಿದ್ದ ಬಗ್ಗೆ ಸಲ್ಲಿಸಿದ್ದ ದೂರು, ಇದೇ ಜುಲೈ 15ಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಸಲ್ಲಿಸಿದ್ದ ದೂರು ಎಲ್ಲದರ ಮಾಹಿತಿ ಪಡೆದುಕೊಂಡಿದೆ.
ದೂರಿನಲ್ಲಿ ಹೇಳಿರುವುದನ್ನೇ ಹೋರಾಟಗಾರರಿಗೂ ಸುಜಾತಾ ಹೇಳಿದ್ದು ಸತ್ಯ ಎಂದು ನಾಯಕರು ನಂಬಿದ್ದರು. ಅಷ್ಟೇ ಅಲ್ಲದೆ ಕೆಲ ದಿನಗಳ ಕಾಲ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿಯೇ ಸುಜಾತಾ ತಂಗಿದ್ದರು.
ಆಗಸ್ಟ್ 19ರಂದು ಬೆಳ್ತಂಗಡಿ ತಾಲೂಕಿನ ಉಜಿರೆಯ ತಿಮರೋಡಿಯಿಂದ ತೆರಳಿದ್ದ ಸುಜಾತಾ, ಹೋರಾಟಕ್ಕೆ ಹಿನ್ನಡೆಯಾಗಿ ರಾತ್ರೋರಾತ್ರಿ ಬೆಂಗಳೂರಿಗೆ ತೆರಳಿದ್ದರು. ದಾಖಲೆಗಳಿದ್ದರೆ ಎಸ್ಐಟಿ ಅಧಿಕಾರಿಗಳಿಗೆ ನೀಡಿ ಎಂದು ನಾಯಕರು ಹೇಳಿದ್ದಾರೆ.
ಪ್ರಕರಣವೇ ಸುಳ್ಳು ಎಂಬ ಬಗ್ಗೆ ಎಸ್ಐಟಿ ಅನೇಕ ಮಾಹಿತಿ ಸಂಗ್ರಹಿಸಿದೆ. ಸಂಗ್ರಹಿಸಿದ ಮಾಹಿತಿಗಳ ಆಧಾರದಲ್ಲಿ ಸುಜಾತಾ ವಿಚಾರಣೆ ಸಾಧ್ಯತೆ ಇದೆ. ಒಂದು ವೇಳೆ ಸುಳ್ಳು ದೂರು ಸಾಬೀತಾದರೆ ಸುಜಾತಾ ಭಟ್ ವಿರುದ್ಧ ಕ್ರಮ ಸಾಧ್ಯತೆ ಇದೆ.






