ಭಾರತ ಅಮೇರಿಕಾ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೆಚ್ಚುವರಿ ಶೇಕಡಾ 25 ರಷ್ಟು ತೆರಿಗೆಯನ್ನು ಘೋಷಿಸಿದ್ದಾರೆ. ಅದರ ಪರಿಣಾಮವಾಗಿ ಭಾರತೀಯ ಅಂಚೆ ಇಲಾಖೆ ಅಮೆರಿಕ ಜೊತೆಗಿನ ಅಂಚೆ ಸೇವೆಯನ್ನು ಸ್ಥಗಿತಗೊಳಿಸಿದೆ. ಅಮೆರಿಕಕ್ಕೆ ಕೆಲವು ವಸ್ತುಗಳ ರವಾನೆ ಸೇವೆಯನ್ನು ಅಮಾನತಿನಲ್ಲಿ ಇರಿಸಿದೆ.
ಅಂಚೆ ಇಲಾಖೆಯು ಈ ನಿರ್ಧಾರ ಕೈಗೊಂಡಿದೆ ಎಂದು ಸಂವಹನ ಸಚಿವಾಲಯವು ಶನಿವಾರ ಹೇಳಿದೆ. ಅಮೆರಿಕದ ಸೀಮಾಸುಂಕ ಇಲಾಖೆಯು ಹೊರಡಿಸಿರುವ ಹೊಸ ನಿಯಮಗಳ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಅಮೆರಿಕಕ್ಕೆ ತೆರಳುವ ವಿಮಾನಗಳು ವಸ್ತುಗಳನ್ನು ರವಾನಿಸಲು ತಡೆಹಾಕಿದೆ.
ಆದರೆ ಪತ್ರಗಳು, ಕಡತಗಳು ಹಾಗೂ 100 ಡಾಲರ್ಗಿಂತ ಕಡಿಮೆ ಮೌಲ್ಯದ ಉಡುಗೊರೆಗಳನ್ನು ಅಮೆರಿಕಕ್ಕೆ ಕಳುಹಿಸಿಕೊಡುವ ಸೇವೆಗಳು ಮುಂದುವರಿಯುತ್ತವೆ.
ಅಮೆರಿಕದ ಆಡಳಿತವು 2025ರ ಜುಲೈ 30ರಂದು ಹೊರಡಿಸಿರುವ ಕಾರ್ಯಕಾರಿ ಆದೇಶದ ಪ್ರಕಾರ 100 ಡಾಲರ್ಗಿಂತ ಹೆಚ್ಚಿನ ಮೌಲ್ಯದ ಸರಕುಗಳಿಗೆ ಅಮೆರಿಕದಲ್ಲಿ ಆಗಸ್ಟ್ 29ರಿಂದ ಸುಂಕ ವಿಧಿಸಲಾಗುತ್ತದೆ. ಈ ಕಾರ್ಯಕಾರಿ ಆದೇಶದಲ್ಲಿ ಹೇಳಿರುವಂತೆ, ಅಂತರರಾಷ್ಟ್ರೀಯ ಅಂಚೆ ಜಾಲ ಅಥವಾ ಅಮೆರಿಕದ ಸೀಮಾಸುಂಕ ಮತ್ತು ಗಡಿ ರಕ್ಷಣಾ ವಿಭಾಗ ಒಪ್ಪಿಗೆ ಪಡೆದಿರುವ ಇತರ ಅರ್ಹ ಸಂಸ್ಥೆಗಳ ಮೂಲಕ ಸರಕು ಸಾಗಣೆ ಮಾಡಿಕೊಡುವ ಸಂಸ್ಥೆಗಳು ಸುಂಕದ ಮೊತ್ತ ಸಂಗ್ರಹಿಸಿ ಮೊತ್ತವನ್ನು ಜಮಾ ಮಾಡಬೇಕು.
ಈ ತಿಂಗಳ ಕೊನೆಯಲ್ಲಿ ಜಾರಿಗೆ ಬರಲಿರುವ ಅಮೆರಿಕ ಕಸ್ಟಮ್ಸ್ ನಿಯಮಗಳಲ್ಲಿನ ಬದಲಾವಣೆಗಳನ್ನು ಆಧರಿಸಿ ಆಗಸ್ಟ್ 25 ರಿಂದ ಅಮೆರಿಕಕ್ಕೆ ಎಲ್ಲಾ ಅಂಚೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಅಂಚೆ ಇಲಾಖೆ ತಿಳಿಸಿದೆ.
ಜುಲೈ 30 ರಂದು ಅಮೆರಿಕ ಆಡಳಿತವು 800 ಡಾಲರ್ ಮೌಲ್ಯದ ಸರಕುಗಳಿಗೆ ಸುಂಕ ಮುಕ್ತ ಡಿ ಮಿನಿಮಿಸ್ ವಿನಾಯಿತಿ ಹಿಂಪಡೆಯುತ್ತಿರುವುದಾಗಿ ಘೋಷಣೆ ಮಾಡಿತ್ತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತದ ಮೇಲೆ ಶೇಕಡಾ 25ರಷ್ಟು ಸುಂಕವನ್ನು ವಿಧಿಸುವುದರ ಜೊತೆಗೆ ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಶೇಕಡಾ 25ರಷ್ಟು ಹೆಚ್ಚುವರಿ ದಂಡವನ್ನು ವಿಧಿಸಿದ್ದರಿಂದ ಒಟ್ಟು ಸುಂಕದ ಹೊರೆ ಶೇಕಡಾ 50ಕ್ಕೆ ಏರಿದೆ.
ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುತ್ತಿದೆ. ಅಲ್ಲದೆ ಖರೀದಿಸಿದ ಹೆಚ್ಚಿನ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ರಷ್ಯಾದ ಯುದ್ಧದಿಂದ ಉಕ್ರೇನ್ನಲ್ಲಿ ಎಷ್ಟು ಜನರು ಸಾಯುತ್ತಿದ್ದಾರೆ ಎಂಬುದು ಭಾರತಕ್ಕೆ ಮುಖ್ಯವಲ್ಲ. ಈ ಕಾರಣದಿಂದಾಗಿ ಭಾರತದ ಮೇಲೆ ವಿಧಿಸುವ ಸುಂಕವನ್ನು ನಾನು ಗಣನೀಯವಾಗಿ ಹೆಚ್ಚಿಸುತ್ತೇನೆ ಎಂದು ಟ್ರಂಪ್ ಹೇಳಿದ್ದರು.
ಈ ಅಮಾನತುಗೊಳಿಸುವಿಕೆಯು ಅಮೆರಿಕದ ಸುಂಕ ನೀತಿ ಬದಲಾವಣೆಯ ಏರಿಳಿತದ ಪರಿಣಾಮಗಳನ್ನು ಒತ್ತಿಹೇಳುತ್ತದೆ, ಗಡಿಯಾಚೆಗಿನ ಇ-ಕಾಮರ್ಸ್ ಮತ್ತು ವೈಯಕ್ತಿಕ ಸಾಗಣೆಗಳು ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ. ಅಮೆರಿಕಕ್ಕೆ ಕಳುಹಿಸಲಾಗದ ಪಾರ್ಸೆಲ್ಗಳನ್ನು ಈಗಾಗಲೇ ಬುಕ್ ಮಾಡಿರುವ ಗ್ರಾಹಕರು ಅಂಚೆ ಮರುಪಾವತಿಗೆ ಅರ್ಹರಾಗಿರುತ್ತಾರೆ. ಅಂಚೆ ಇಲಾಖೆಯು ಈ ಅಡಚಣೆಗೆ ವಿಷಾದ ವ್ಯಕ್ತಪಡಿಸಿತು ಮತ್ತು ಪರಿಸ್ಥಿತಿಯನ್ನು ಪರಿಹರಿಸಲು ಮತ್ತು ಸೇವೆಗಳನ್ನು ಸಾಧ್ಯವಾದಷ್ಟು ಬೇಗ ಪುನಃಸ್ಥಾಪಿಸಲು ಅದು CBP, USPS ಮತ್ತು ಇತರ ಪಾಲುದಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.






