ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ತಮ್ಮದೇ ಆದ ಗುರುತನ್ನು ಪಡೆದಿರುವ ನಟಿ ಕಾರುಣ್ಯ ರಾಮ್ ಅವರು, ಸ್ವಂತ ತಂಗಿಯ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ತಮ್ಮ ಸಹೋದರಿ ಸಮೃದ್ಧಿ ರಾಮ್ ವಿರುದ್ಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಬೆಳಕಿಗೆ ಬಂದಿದೆ.
ಇದನ್ನು ಓದಿ: 2026 ರಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳು
ಇದನ್ನು ಓದಿ: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರವಣಿಗೆ ಬರಲ್ಲವೇ?ಟ್ರೋಲ್ಗೆ ಗುರಿಯಾದ ಅಶ್ವಿನಿ ಗೌಡ
ನಟಿ ಕಾರುಣ್ಯ ರಾಮ್ ನೀಡಿರುವ ದೂರಿನ ಪ್ರಕಾರ, ಅವರ ಸಹೋದರಿ ಸಮೃದ್ಧಿ ರಾಮ್ ಅವರು ಮನೆಯಲ್ಲಿದ್ದ ಹಣ ಮತ್ತು ಚಿನ್ನದ ಒಡವೆಗಳನ್ನು ದುರುಪಯೋಗ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಸಮೃದ್ಧಿ ರಾಮ್ ಅವರು ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದು, ಅದರಿಂದ ಸುಮಾರು 25 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಟ್ಟಿಂಗ್ನಲ್ಲಿ ಕಳೆದುಕೊಂಡ ಹಣವನ್ನು ತುಂಬಲು ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದುಕೊಂಡಿದ್ದಾರೆ. ಅಲ್ಲದೆ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನದ ಒಡವೆಗಳನ್ನು ಸಹ ಬಳಸಿ ಮತ್ತೆ ಬೆಟ್ಟಿಂಗ್ ಆಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮನೆಯವರು ಪ್ರಶ್ನೆ ಮಾಡಿದಾಗ ಸಮೃದ್ಧಿ ಮನೆ ಬಿಟ್ಟು ತೆರಳಿದ್ದಾರೆ ಎನ್ನಲಾಗಿದೆ.
ಇದೀಗ ಸಮೃದ್ಧಿಗೆ ಸಾಲ ನೀಡಿರುವವರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಕಾರುಣ್ಯ ರಾಮ್ ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಸಮೃದ್ಧಿ ರಾಮ್ ಜೊತೆಗೆ ಪ್ರತಿಭಾ, ರಕ್ಷಿತ್, ಪ್ರಜ್ವಲ್ ಮತ್ತು ಸಾಗರ್ ಎಂಬವರ ವಿರುದ್ಧವೂ ಕಾರುಣ್ಯ ರಾಮ್ ದೂರು ದಾಖಲಿಸಿದ್ದು, ಆರ್.ಆರ್.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಟಿ ಕಾರುಣ್ಯ ರಾಮ್ ಅವರು ‘ಪೆಟ್ರೊಮ್ಯಾಕ್ಸ್’, ‘ವಜ್ರಕಾಯ’, ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’, ‘ಎರಡನೇ ಮದುವೆ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಸಹೋದರಿ ಸಮೃದ್ಧಿ ರಾಮ್ ಅವರು ‘ರಾಜಾ ರಾಣಿ’ ಹಾಗೂ ‘ಮನೆ ದೇವ್ರು’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.






