ಅಕ್ಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕನೊಬ್ಬ ಆಕ್ರೋಶಗೊಂಡು ದೇವಸ್ಥಾನದಲ್ಲೇ ಯುವಕನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಇದನ್ನು ಓದಿ: ಸೋಶಿಯಲ್ ಮೀಡಿಯಾದಲ್ಲಿ ಬರ್ತ್ಡೇ ವಿಶ್ ಮಾಡಿದ್ದಕ್ಕೆ ಹತ್ಯೆ! ಚಿಕ್ಕಮಗಳೂರಿನಲ್ಲಿ ಯುವಕನ ಕೊಲೆ
ಇದನ್ನು ಓದಿ: ಬಾಲಿವುಡ್ ‘ಅಮ್ಮಾ’ ಗೀತಾ ಕಪೂರ್ ತನ್ನ ವೈಯಕ್ತಿಕ ಜೀವನವನ್ನು ಬಹಿರಂಗ ಮಾಡುತ್ತಾ ಸಂಚಲನ ಮೂಡಿಸಿದರು
ಮೃತ ವ್ಯಕ್ತಿಯನ್ನು ರಾಜಾಪುರ ಗ್ರಾಮದ ಮಂಜುನಾಥ ಸುಭಾಷ್ ಎಣ್ಣಿ (23) ಎಂದು ಗುರುತಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಮಂಜುನಾಥ್ ಅಪ್ರಾಪ್ತ ಬಾಲಕನ ಸಹೋದರಿಯೊಂದಿಗೆ ಪ್ರೀತಿಯ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಈ ವಿಷಯವಾಗಿ ಬಾಲಕ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಮಂಜುನಾಥ್ ಆಕೆಯೊಂದಿಗೆ ಮಾತನಾಡುವುದು ಹಾಗೂ ಭೇಟಿಯಾಗುವುದನ್ನು ಮುಂದುವರಿಸಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಂಜುನಾಥ್ ರಾಜಾಪುರದ ಚೂನಮ್ಮ ದೇವಿಯ ದೇವಸ್ಥಾನದಲ್ಲಿ ಪೂಜಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ ಪೂಜೆ ಸಲ್ಲಿಸಲು ದೇವಾಲಯಕ್ಕೆ ಬಂದ ವೇಳೆ, ಯಾರೂ ಇಲ್ಲದ ಸಮಯವನ್ನು ಬಳಸಿಕೊಂಡ ಬಾಲಕ, ಕಬ್ಬಿಣದ ರಾಡ್ನಿಂದ ಮಂಜುನಾಥ ಅವರ ತಲೆಗೆ ಮಾರಕವಾಗಿ ಹಲ್ಲೆ ನಡೆಸಿದ್ದಾನೆ.
ಹಲ್ಲೆಯ ನಂತರ ಬಾಲಕ ಅಲ್ಲಿಂದ ಪರಾರಿಯಾಗಿದ್ದು, ತೀವ್ರ ರಕ್ತಸ್ರಾವದಿಂದ ಮಂಜುನಾಥ್ ದೇವಸ್ಥಾನ ಆವರಣದಲ್ಲೇ ಸಾವನ್ನಪ್ಪಿದ್ದಾರೆ. ಪ್ರಕರಣದ ಮಾಹಿತಿ ಪಡೆದ ಘಟಪ್ರಭಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.






