ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡ ಕ್ರಾಸ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಕಾರು ಬೈಕ್ ಮತ್ತು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಮೃತರನ್ನು ಬೈಕ್ ಸವಾರರಾದ ಗಣಪತಿ ಬತ್ತಿ (42), ತಪನ್ ಕುಮಾರ್ ದಲಾಯಿ (46) ಹಾಗೂ ಪಾದಚಾರಿಯೆಂದು ಗುರುತಿಸಲಾಗಿದೆ. ಮತ್ತೋರ್ವ ವ್ಯಕ್ತಿಯ ಗುರುತು ಪತ್ತೆಯಾಗುವ ಕಾರ್ಯವನ್ನು ಪೊಲೀಸರು ಮುಂದುವರೆಸಿದ್ದಾರೆ.
ಸಾಂಗ್ಲಿಯಿಂದ ಮುಧೋಳ ಕಡೆಗೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮೊದಲು ಬೈಕ್‌ಗೆ, ನಂತರ ಪಾದಚಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಕಾರು ಚಾಲಕ ಸುಭಾಷ್ ರಾಮತೀರ್ಥ ಗಂಭೀರವಾಗಿ ಗಾಯಗೊಂಡಿದ್ದು, ಮುಧೋಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಮುಧೋಳ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆಘಾತ ವ್ಯಕ್ತವಾಗಿದೆ.






