ಪತ್ನಿಯ ಸಾವಿನ ಆಘಾತವನ್ನು ತಾಳಲಾರದೆ ವ್ಯಕ್ತಿಯೊಬ್ಬ ತನ್ನ ಮೂವರು ಅಪ್ರಾಪ್ತ ಮಕ್ಕಳಿಗೆ ವಿಷ ನೀಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಹೊಸ ವರ್ಷದ ಮುನ್ನಾದಿನವಾದ ಗುರುವಾರ ನಂದ್ಯಾಲ್ ಜಿಲ್ಲೆಯ ಉಯ್ಯಾಲವಾಡ ಮಂಡಲದ ತುಡುಮಲ ದಿನ್ನೆ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.
ಇದನ್ನು ಓದಿ: ದಾವಣಗೆರೆ: ಮಗಳ ಮೇಲೆ ದೌರ್ಜನ್ಯ ಮಾಡಲು ಮುಂದಾದ ಕಪಟಿ ತಂದೆ!
ತುಡುಮಲ ದಿನ್ನೆ ಗ್ರಾಮದ ನಿವಾಸಿ ವೇಮುಲಪತಿ ಸುರೇಂದ್ರ (35) ಅವರು ಸುಮಾರು ಎಂಟು ವರ್ಷಗಳ ಹಿಂದೆ ಅವುಕು ಮಂಡಲದ ಮಹೇಶ್ವರಿಯನ್ನು ವಿವಾಹವಾಗಿದ್ದರು. ಕೃಷಿ ಕಾರ್ಮಿಕನಾಗಿ ದುಡಿಯುತ್ತಿದ್ದ ಸುರೇಂದ್ರ ದಂಪತಿಗೆ ಕಾವ್ಯಶ್ರೀ (7), ಧ್ಯಾನೇಶ್ವರಿ (4) ಹಾಗೂ ಸೂರ್ಯಗಗನ್ (1) ಎಂಬ ಮೂರು ಮಕ್ಕಳು ಇದ್ದರು. ಆದರೆ ಕಳೆದ ವರ್ಷ ಆಗಸ್ಟ್ 16ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಮಹೇಶ್ವರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪತ್ನಿಯ ಸಾವಿನ ನಂತರ ಕುಟುಂಬದ ಹೊಣೆ ಸಂಪೂರ್ಣವಾಗಿ ಸುರೇಂದ್ರ ಮೇಲೆಯೇ ಬಿದ್ದಿತ್ತು. ಮಕ್ಕಳನ್ನು ನೋಡಿಕೊಳ್ಳಲು ಯಾರ ಸಹಾಯವೂ ಸಿಗದೆ, ಸಂಬಂಧಿಕರು ದೂರ ಉಳಿದಿದ್ದರು. ಈ ಕಾರಣದಿಂದ ಇಬ್ಬರು ಹೆಣ್ಣುಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದ ಸುರೇಂದ್ರ, ಕಿರಿಯ ಮಗುವಿನ ಪಾಲನೆ ಹೇಗೆ ಮಾಡಬೇಕು ಎಂಬುದರಲ್ಲೇ ಗೊಂದಲದಲ್ಲಿದ್ದರು., ಸುರೇಂದ್ರ ಅವರ ತಂದೆ ಪಾರ್ಶ್ವವಾಯುವಿಗೆ ಒಳಗಾಗಿ ಹಾಸಿಗೆ ಹಿಡಿದಿದ್ದರು.
ತಾಯಿಯ ಮರಣದ ನಂತರ ಸುರೇಂದ್ರನ ತಂದೆ ಮತ್ತೊಂದು ಮದುವೆ ಮಾಡಿಕೊಂಡು ಪ್ರತ್ಯೇಕವಾಗಿ ವಾಸಿಸುತ್ತಿದ್ದರಿಂದ, ಮಕ್ಕಳ ಆರೈಕೆಗೆ ಕುಟುಂಬದಿಂದ ಯಾವುದೇ ಬೆಂಬಲ ಇರಲಿಲ್ಲ. ಕಳೆದ ಐದು ತಿಂಗಳುಗಳ ಕಾಲ ಹೇಗೋ ಮಕ್ಕಳನ್ನು ಸಾಕುತ್ತಿದ್ದ ಸುರೇಂದ್ರ, ಒಂದು ಕಡೆ ಆರ್ಥಿಕ ಸಂಕಷ್ಟ, ಮತ್ತೊಂದು ಕಡೆ ಮಾನಸಿಕ ಒತ್ತಡದಿಂದ ತೀವ್ರ ಯಾತನೆಯಲ್ಲಿ ಬದುಕುತ್ತಿದ್ದನು.
ಈ ಒತ್ತಡಕ್ಕೆ ಕೊನೆಗೂ ಶರಣಾದ ಸುರೇಂದ್ರ ತನ್ನ ಮೂವರು ಮಕ್ಕಳಿಗೆ ವಿಷ ಕುಡಿಸಿ, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಯಲ್ಲಿ ಹಾಲಿನ ಕಾರ್ಟನ್ ಹಾಗೂ ಮಕ್ಕಳಿಗೆ ಇಷ್ಟವಾಗುವ ಕೂಲ್ ಡ್ರಿಂಕ್ ಬಾಟಲಿಗಳು ಪತ್ತೆಯಾಗಿದ್ದು, ಹೆಣ್ಣುಮಕ್ಕಳಿಗೆ ಕೂಲ್ ಡ್ರಿಂಕ್ನಲ್ಲಿ ವಿಷ ನೀಡಿದ್ದು, ಕಿರಿಯ ಮಗನಿಗೆ ಬೇರೆ ರೀತಿಯಲ್ಲಿ ವಿಷ ಕುಡಿಸಿದ್ದಾನೆ ಎನ್ನಲಾಗಿದೆ.
ಬೆಳಿಗ್ಗೆ 8 ಗಂಟೆಯಾದರೂ ಮಕ್ಕಳು ಮನೆಯಿಂದ ಹೊರಬಾರದಿರುವುದನ್ನು ಗಮನಿಸಿದ ಪಕ್ಕದ ಬೀದಿಯಲ್ಲಿ ವಾಸಿಸುವ ಸುರೇಂದ್ರನ ಮಲತಾಯಿ ಅನುಮಾನಗೊಂಡು ಮನೆಗೆ ತೆರಳಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಗುರುವಾರ ರಾತ್ರಿ ಸುರೇಂದ್ರನ ಅಣ್ಣ ಹಾಗೂ ಸಂಬಂಧಿಕರು ನಾಲ್ವರ ಅಂತ್ಯಕ್ರಿಯೆಯನ್ನು ನೆರವೇರಿಸಿದರು.







1 thought on “ಪತ್ನಿ ಅಗಲಿಕೆಯ ನೋವಿನಲ್ಲಿ ಮೂವರು ಮಕ್ಕಳಿಗೆ ವಿಷ ನೀಡಿ ತಂದೆಯೂ ಆತ್ಮಹತ್ಯೆ..ಈ ಹೃದಯವಿದ್ರಾವಕ ಘಟನೆ ನಡೆದಿದೆಲ್ಲಿ??”