ಮತಕಳ್ಳತನದ ಬಗ್ಗೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡಿದ್ದ ಗಂಭೀರ ಆರೋಪಕ್ಕೆ ರಾಜಣ್ಣ ಅವರು ಸ್ವಪಕ್ಷದ ವಿರುದ್ಧವೇ ಹೇಳಿಕೆ ನೀಡಿದ್ದು ಅವರಿಗೆ ಇದೀಗ ಮುಳುವಾಗಿದೆ.
ಹೈಕಮಾಂಡ್ ನೀಡುವ ಸೂಚನೆ ಹಿನ್ನೆಲೆಯಲ್ಲಿ ಇಂದು ಸಚಿವ ಸ್ಥಾನಕ್ಕೆ ಸಹಕಾರ ಸಚಿವ ರಾಜಣ್ಣ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿರುವ ಅವರು ಸದ್ಯ ತುಮಕೂರು ಜಿಲ್ಲೆ ಮಧುಗಿರಿ ವಿಧಾನಸಭಾದ ಶಾಸಕರಾಗಿದ್ದಾರೆ.
ರಾಜೀನಾಮೆ ಪತ್ರವನ್ನು ಹೆಚ್ಚಿನ ಕ್ರಮಕ್ಕಾಗಿ ಮುಖ್ಯಮಂತ್ರಿಗಳು ರಾಜಭವನಕ್ಕೆ ರವಾನಿಸಿದ್ದರು. ರಾಜ್ಯಪಾಲರು ಸಹ ರಾಜೀನಾಮೆ ಅಂಗೀಕರಿಸಿದ್ದಾರೆ.
ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲಿ 2ನೇ ವಿಕೆಟ್ ಪತನವಾದಂತೆ ಆಗಿದೆ. ಈ ಹಿಂದೆ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕರ್ನಾಟಕದಲ್ಲಿ ಮತದಾರರ ಪಟ್ಟಿಯಲ್ಲಿ ಲೋಪದೋಷವಾಗಿರುವ ಬಗ್ಗೆ ಕೆ.ಎನ್.ರಾಜಣ್ಣ ಮಾತನಾಡಿದ್ದರು. 2024ರ ಲೋಕಸಭಾ ಚುನಾವಣೆ ನಡೆದಾಗ, ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರವೇ ಇತ್ತು. ನಾವೇ ಮತದಾರರ ಪಟ್ಟಿಯ ಬಗ್ಗೆ ನೋಡಿಕೊಳ್ಳಬೇಕಾಗಿತ್ತು. ಇದರಲ್ಲಿ ನಮ್ಮ ತಪ್ಪು ಕೂಡ ಇದೆ. ವೋಟಿಂಗ್ ಲಿಸ್ಟ್ ತಯಾರಾಗಿದ್ದೇ ನಮ್ಮ ಸರ್ಕಾರದ ಅವಧಿಯಲ್ಲಿ. ಮತದಾರರ ಪಟ್ಟಿಯಲ್ಲಿ ಆಕ್ರಮ ನಡೆದಿರೋದು ನಿಜ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಮಹದೇವಪುರ ಅಸೆಂಬ್ಲಿಯಲ್ಲಿ ನಮ್ಮ ಲೋಪ ಕೂಡ ಇದೆ. ಲೋಕಸಭೆ ಚುನಾವಣೆ ವೇಳೆ ನಾವೇ ಅಧಿಕಾರದಲ್ಲಿದ್ದೇವು ಎಂದು ಸಹಕಾರ ಸಚಿವ ಕೆ. ಎನ್.ರಾಜಣ್ಣ ಮಾತನಾಡಿದ್ದರು. ಕೆ.ಎನ್. ರಾಜಣ್ಣ ಅವರ ಈ ಹೇಳಿಕೆಯ ವಿರುದ್ಧ ಕಾಂಗ್ರೆಸ್ ನಾಯಕರು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾಗೆ ದೂರು ನೀಡಿದ್ದರು.
ರಾಜಣ್ಣ ಪರ ಸಿದ್ದು ಬ್ಯಾಟಿಂಗ್
ಸಚಿವ ಕೆಎನ್ ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡವರು. ಹೀಗಾಗಿ ರಾಜಣ್ಣರನ್ನು ಸಂಪುಟದಲ್ಲೇ ಉಳಿಸಿಕೊಳ್ಳಲು ಸಿಎಂ ಶತಪ್ರಯತ್ನ ನಡೆಸಿದ್ದರು. ಕಳೆದ ಒಂದು ಗಂಟೆಯಿಂದಲೂ ಹೈಕಮಾಂಡ್ ಮಟ್ಟದ ಪ್ರತಿನಿಧಿಗಳ ಜೊತೆ ಸಿಎಂ ಚರ್ಚೆ ನಡೆಸಿದ್ದರು
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾಗೆ ಸಿಎಂ ಕರೆ ಮಾಡಿದ್ರು. ಹೈಕಮಾಂಡ್ ನಿರ್ಧಾರ ವಾಪಸ್ಸು ಪಡೆಯುವಂತೆ ಪ್ರಯತ್ನಿಸಿದ್ರು ಎನ್ನಲಾಗಿದೆ. ರಾಜಣ್ಣರನ್ನ ಮಂತ್ರಿ ಸ್ಥಾನದಿಂದ ಕೈ ಬಿಡೋದು ಬೇಡ, ಪಕ್ಷದಿಂದಲೂ ಉಚ್ಚಾಟನೆ ಬೇಡ. ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಸಿಎಂ ಮನವಿ ಮಾಡಿಕೊಂಡ್ರು. ಆದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ರಾಜೀನಾಮೆ ನೀಡದಿದ್ದರೆ ಪಕ್ಷದಿಂದಲೇ ಉಚ್ಚಾಟನೆ
ಸಿಎಂ ರಾಜೀನಾಮೆ ಕೇಳಿದಾಗ ರಾಜಣ್ಣ ಕೂಡಲೇ ಕೊಟ್ಟಿರಲಿಲ್ಲ. ಆದರೆ ರಾಜಣ್ಣ ರಾಜೀನಾಮೆ ಕೊಡದಿದ್ದರೆ ಉಚ್ಚಾಟನೆ ಮಾಡುವಂತೆ ಹೈಕಮಾಂಡ್ ಖಡಕ್ ಆಗಿ ತಿಳಿಸಿತ್ತಂತೆ. ಹೀಗಾಗಿ ರಾಜೀನಾಮೆ ಕೊಡದಿದ್ದರೆ ಉಚ್ಚಾಟನೆ ಆಗ್ತೀಯಾ ಎಂದು ಸಿಎಂ ಎಚ್ಚರಿಸಿದ್ದರು. ಸಿಎಂ ಎಚ್ಚರಿಕೆ ನೀಡಿದ ಬಳಿಕ ರಾಜಣ್ಣ ರಾಜೀನಾಮೆ ನೀಡಿದ್ದಾರೆ.