ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬೀದಿ ನಾಯಿಗಳ ಕಾಟ ಹಾಗೂ ಸಾಕು ನಾಯಿಗಳ ದಾಳಿ ಪ್ರಕರಣಗಳಿಗೆ ತಡೆ ಹಾಕುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವದ ನಿರ್ಧಾರ ಕೈಗೊಂಡಿದೆ. ಸುಪ್ರೀಂ ಕೋರ್ಟ್ ಸೂಚನೆಗಳ ಹಿನ್ನೆಲೆಯಲ್ಲಿ ಸಾಕು ನಾಯಿಗಳ ಪಾಲನೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ಬೈಲಾ ಜಾರಿಗೆ ತರಲಾಗಿದ್ದು, ಇದು ಶ್ವಾನ ಪ್ರಿಯರಿಗೆ ದೊಡ್ಡ ಶಾಕ್ ಆಗಿದೆ.
ಇನ್ನು ಮುಂದೆ ಹೊಸ ನಿಯಮಗಳನ್ನು ಲೆಕ್ಕಿಸದೆ ಮನಬಂದಂತೆ ನಾಯಿ ಸಾಕಿದರೆ, ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ಜೈಲು ಶಿಕ್ಷೆಯವರೆಗೂ ವಿಧಿಸುವಂತೆ ಜಿಬಿಎ ಮುಖ್ಯ ಆಯುಕ್ತರು ಐದು ನಗರಪಾಲಿಕೆ ಆಯುಕ್ತರಿಗೆ ಕಠಿಣ ಸೂಚನೆ ನೀಡಿದ್ದಾರೆ. 1960ರ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಅನ್ವಯ ಜಿಬಿಎ ಪಶುಪಾಲನಾ ವಿಭಾಗ ಹೊರಡಿಸಿರುವ ಮಾರ್ಗಸೂಚಿಯಂತೆ, ಬೆಂಗಳೂರಿನಲ್ಲಿ ನಾಯಿ ಸಾಕುವ ಪ್ರತಿಯೊಬ್ಬರೂ ಕಡ್ಡಾಯವಾಗಿ ‘ಪೆಟ್ ಲೈಸೆನ್ಸ್’ ಪಡೆಯಬೇಕು.
ಇದನ್ನು ಓದಿ: ಭಾರತದ ಮೊದಲ ಸಂಗೀತ ರಸ್ತೆ ಎಲ್ಲಿದೆ ಗೊತ್ತಾ? ಇದರ ಸ್ಪೆಷಾಲಿಟಿ ಕೇಳಿದ್ರೆ ಶಾಕ್ ಆಗ್ತೀರಾ!!
ಇದನ್ನು ಓದಿ: KSRTC ಬಸ್ನಲ್ಲಿ ಬೆಕ್ಕಿನ ಮರಿಗೂ ಟಿಕೆಟ್; ನಿರ್ವಾಹಕ
ಇದನ್ನು ಓದಿ: ಸಾಕು ನಾಯಿಯ ಅನಾರೋಗ್ಯದಿಂದ ತೀವ್ರ ಮನನೊಂದು: ಲಖನೌನಲ್ಲಿ ಇಬ್ಬರು ಸಹೋದರಿಯರ ಆತ್ಮಹತ್ಯೆ
ನಿಗದಿತ ಶುಲ್ಕವನ್ನು ವರ್ಷಂಪ್ರತಿ ಪಾವತಿಸಿ ಆ ಲೈಸೆನ್ಸ್ ನವೀಕರಿಸಿಕೊಳ್ಳುವುದು ಅಗತ್ಯವಾಗಿದೆ. ಇದೇ ವೇಳೆ ಪ್ರತಿ ಸಾಕು ನಾಯಿಗೂ ಮಾಲೀಕರು ತಮ್ಮ ವೆಚ್ಚದಲ್ಲಿ ಮೈಕ್ರೋಚಿಪ್ ಅಳವಡಿಸಬೇಕು. ಆ ಚಿಪ್ನಲ್ಲಿ ನಾಯಿಯ ವಯಸ್ಸು, ತಳಿ ಮತ್ತು ಮಾಲೀಕರ ಸಂಪರ್ಕ ಮಾಹಿತಿ ಸಂಗ್ರಹವಾಗಿರುತ್ತದೆ. ನಾಯಿ ಕಳೆದುಹೋದರೆ ಅಥವಾ ರಸ್ತೆಗೆ ಬಿಟ್ಟರೆ ಸುಲಭವಾಗಿ ಪತ್ತೆಹಚ್ಚಲು ಇದು ಸಹಾಯಕವಾಗಲಿದೆ. ಜೊತೆಗೆ, ಪ್ರತಿವರ್ಷ ರೇಬಿಸ್ ಲಸಿಕೆ ಹಾಕಿಸಿ, ನೋಂದಾಯಿತ ಪಶುವೈದ್ಯರಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ.
12 ತಿಂಗಳಿಗಿಂತ ಮೇಲ್ಪಟ್ಟ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿರಬೇಕು ಎಂಬುದನ್ನೂ ನಿಯಮ ಸ್ಪಷ್ಟಪಡಿಸಿದೆ. ಬೀದಿ ನಾಯಿಗಳಿಗೆ ಆಹಾರ ನೀಡುವ ವಿಷಯದಲ್ಲೂ ನಿಯಂತ್ರಣ ಹೇರಲಾಗಿದೆ. ಜಿಬಿಎ ಗುರುತಿಸಿದ ಸ್ಥಳಗಳಲ್ಲಿ ಮಾತ್ರ ಆಹಾರ ನೀಡಲು ಅವಕಾಶವಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಆಹಾರ ಹಾಕಿದರೆ ದಂಡ ವಿಧಿಸಲಾಗುತ್ತದೆ.
ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಚ್ಚುವ ಸ್ವಭಾವ ಹೊಂದಿರುವ ಕೆಲವು ವಿದೇಶಿ ತಳಿಯ ನಾಯಿಗಳ ಸಾಕಾಣಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಹಾಗೆಯೇ, ಒಂದು ಮನೆಯಲ್ಲಿ ಗರಿಷ್ಠ ಮೂರು ನಾಯಿಗಳಿಗಷ್ಟೇ ಅನುಮತಿ ನೀಡಲಾಗಿದೆ.
ನೆರೆಹೊರೆಯವರಿಗೆ ತೊಂದರೆ ಆಗದಂತೆ ಸಾಕಾಣಿಕೆ ನಡೆಸಬೇಕು ಎಂದು ಸೂಚಿಸಲಾಗಿದೆ. ಮೂರಕ್ಕಿಂತ ಹೆಚ್ಚು ನಾಯಿಗಳನ್ನು ಸಾಕಿದರೆ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದು ಪ್ರಾಣಿ ಕಲ್ಯಾಣ ಕೇಂದ್ರಗಳಿಗೆ ಕಳುಹಿಸುವ ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳನ್ನು ವಾಕಿಂಗ್ಗೆ ಕರೆದುಕೊಂಡು ಹೋಗುವಾಗ ಕಡ್ಡಾಯವಾಗಿ ಲೀಶ್ ಮತ್ತು ಮಾಸ್ಕ್ ಬಳಕೆ ಮಾಡಬೇಕು. ವಾಕಿಂಗ್ ವೇಳೆ ನಾಯಿ ಗಲೀಜು ಮಾಡಿದರೆ, ಅದನ್ನು ಮಾಲೀಕರೇ ತಕ್ಷಣ ಸ್ವಚ್ಛಗೊಳಿಸಬೇಕಾಗಿದೆ.
ಜಿಬಿಎ ಹೊರಡಿಸಿದ ಈ ಆದೇಶಕ್ಕೆ ನಗರದಲ್ಲಿನ ಶ್ವಾನ ಪ್ರಿಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ನಾವು ನಾಯಿಗಳನ್ನು ಪ್ರಾಣಿಗಳಂತೆ ಅಲ್ಲ, ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತೇವೆ. ಹಲವರ ಮನೆಗಳಲ್ಲಿ ಅನಾಥ ಬೀದಿ ನಾಯಿಗಳಿಗೆ ಆಶ್ರಯ ನೀಡಲಾಗಿದೆ. ಕೇವಲ ಮೂರು ನಾಯಿಗಳ ಮಿತಿ ಅವೈಜ್ಞಾನಿಕ ಮತ್ತು ಅನ್ಯಾಯಕರ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದೇಶ ಹಿಂಪಡೆಯದಿದ್ದರೆ ಪಾಲಿಕೆ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: ಕೆನರಾ ಬ್ಯಾಂಕ್ ಶಾಖೆಯಲ್ಲಿ ನಕಲಿ ಗೋಲ್ಡ್ ಲೋನ್ಗಳ ಮೂಲಕ 3 ಕೋಟಿ ರೂ. ವಂಚನೆ: ಮ್ಯಾನೇಜರ್ ವಿರುದ್ಧ FIR ದಾಖಲು!!!





