ಸಿದ್ದಾಪುರ ಮೂಲದ ಸುಸಂಸ್ಕೃತ ಕುಟುಂಬದ ಗಂಡ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ತೆರಳಿದ್ದ ಸಮಯದಲ್ಲಿ, ಸಮಾಜ ಸೇವೆ ಹಾಗೂ ಜ್ಯೋತಿಷ್ಯದ ಹೆಸರಿನಲ್ಲಿ ಪರಿಹಾರ ನೀಡುವುದಾಗಿ ನಂಬಿಸಿದ್ದ ಗುರೂಜಿ ಕಮಲಾಕರ್ ಭಟ್ ಮಹಿಳೆಯನ್ನು ತನ್ನ ಪ್ರಭಾವಕ್ಕೆ ಒಳಪಡಿಸಿ, ಆಕೆಯೊಂದಿಗೆ ಸಂಸಾರ ನಡೆಸುತ್ತಿದ್ದಾನೆ.
ಈ ನಡುವೆ ಮಹಿಳೆಯ ಇಬ್ಬರು ಮಕ್ಕಳಿಗೆ ಕಿರುಕುಳ ನೀಡಲಾಗಿದ್ದು, ಅವರನ್ನು ರಕ್ಷಿಸಲು ಮುಂದಾದ ಗಂಡ ಮತ್ತು ದೊಡ್ಡಪ್ಪನ ಮೇಲೆ ಹಲ್ಲೆ ನಡೆದಿದೆ. ಚಾಕು ಇರಿತದಿಂದ ಮಹಿಳೆಯ ಗಂಡನ ಅಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ಪ್ರಕರಣದಲ್ಲಿ ಗುರೂಜಿ ಕಮಲಾಕರ್ ಭಟ್, ಮಹಿಳೆ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ: ಅನುಮಾನ ಭೂತಕ್ಕೆ ಅಮಾನವೀಯ ಕೃತ್ಯ: ಪತ್ನಿಯ ತಲೆ ಬೋಳಿಸಿದ ಪತಿ
ಇದನ್ನು ಓದಿ:ಎಲ್ಲರಿಗಿಂತ ವಿಭಿನ್ನವಾಗಿ ಕಾಣಿಸಲು ಯುವಕನಿಂದ ಕಣ್ಣುಗಳ ಮೇಲೆ ಟ್ಯಾಟೂ..!
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಮಹೇಶ್ ನಾಯ್ಕ್ ಅವರ ಪತ್ನಿ ಮತ್ತು ಮಕ್ಕಳು ಊರಲ್ಲೇ ವಾಸವಾಗಿದ್ದರು. ಕುಟುಂಬದ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಸಲಹೆ ಕೇಳಲು ಹೋಗಿದ್ದ ಸುಚಿತ್ರಾಳನ್ನು ಗುರೂಜಿ ಕಮಲಾಕರ್ ಭಟ್ ಸಮೀಪಿಸಿಕೊಂಡು, ಜ್ಯೋತಿಷ್ಯ ಹೇಳುವ ನೆಪದಲ್ಲಿ ಆಗಾಗ ಕರೆಸಿಕೊಂಡಿದ್ದಾನೆ.
ಕಾಲಕ್ರಮೇಣ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದ್ದು, ಈ ವಿಚಾರ ಗಂಡನ ಕುಟುಂಬಕ್ಕೆ ತಿಳಿದ ಬಳಿಕ ಮಹೇಶ್ ಮನೆಗೆ ಬಂದು ಪತ್ನಿಗೆ ಬುದ್ಧಿ ಹೇಳಿ ಮತ್ತೆ ಕೆಲಸಕ್ಕಾಗಿ ಬೆಂಗಳೂರಿಗೆ ಮರಳಿದ್ದಾನೆ. ಆದರೆ ಗಂಡ ದೂರವಾದ ಬಳಿಕವೂ ಮಹಿಳೆ ಗುರೂಜಿಯ ಸಂಪರ್ಕ ಮುಂದುವರಿಸಿದ್ದು, ಆರು ತಿಂಗಳ ಹಿಂದೆ ಮಕ್ಕಳೊಂದಿಗೆ ಸ್ವಾಮೀಜಿ ಮನೆಗೆ ತೆರಳಿ ಅಲ್ಲಿ ವಾಸ ಆರಂಭಿಸಿದ್ದಾಳೆ. ಅಲ್ಲಿ ಮಹಿಳೆ ಮತ್ತು ಗುರೂಜಿ ಒಂದೇ ಕೋಣೆಯಲ್ಲಿ ಇದ್ದರೆ, ಮಕ್ಕಳನ್ನು ಬೇರೆ ಕೋಣೆಯಲ್ಲಿ ಇರಿಸಲಾಗುತ್ತಿತ್ತು ಎನ್ನಲಾಗಿದೆ.
ಇದನ್ನು ಓದಿ: ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ – ಭಾರತ ತೀವ್ರ ಖಂಡನೆ
ಗುರೂಜಿಯ ಮನೆಯಲ್ಲಿ ವಾಸವಾಗಿದ್ದ ವೇಳೆ ಸುಚಿತ್ರಾಳ ಪುತ್ರಿಯರಾದ ಸುಮಶ್ರೀ ಮತ್ತು ಅಮೃತಾಗೆ ಕಿರುಕುಳ ನೀಡಲಾಗಿದೆ. ತಾಯಿಯ ವರ್ತನೆ ತಪ್ಪೆಂದು ಮಕ್ಕಳು ಪ್ರಶ್ನಿಸಿದಾಗ, ಅವರನ್ನು ಬೆದರಿಸಿ ‘ಇಲ್ಲಿ ಇರಬೇಡ, ಇಲ್ಲವಾದರೆ ವಿಷ ಹಾಕುತ್ತೇವೆ’ ಎಂದು ಹೇಳಲಾಗುತ್ತಿತ್ತು ಎಂಬ ಆರೋಪವಿದೆ. ಇದರಿಂದ ಭಯಭೀತಳಾದ ಮಗಳು ತಂದೆಗೆ ‘ಅಪ್ಪಾ ಸೇವ್ ಮೀ’ ಎಂದು ಸಂದೇಶ ಕಳುಹಿಸಿದ್ದಾಳೆ.
ಬಳಿಕ ಮಹೇಶ್ ಮಗಳನ್ನು ಶಿವಮೊಗ್ಗಕ್ಕೆ ಕರೆಸಿಕೊಂಡು, ತನ್ನ ಅಣ್ಣ ವಸಂತ್ ನಾಯ್ಕ್ ಅವರ ಮನೆಯಲ್ಲಿ ಇರಿಸಿದ್ದಾನೆ. ಈ ವಿಷಯ ತಿಳಿದ ಸುಚಿತ್ರಾ, ತನ್ನ ತಂದೆ ಲೋಕನಾಥ್ ಹಾಗೂ ಗುರೂಜಿ ಕಮಲಾಕರ್ ಭಟ್ ಜೊತೆಗೆ ಐವರು ಅಪರಿಚಿತ ವ್ಯಕ್ತಿಗಳನ್ನು ಕರೆದುಕೊಂಡು ಕಾರಿನಲ್ಲಿ ವಸಂತ್ ನಾಯ್ಕ್ ಅವರ ಮನೆಗೆ ದಾಳಿ ನಡೆಸಿದ್ದಾರೆ.
ಮಗಳನ್ನು ಒಪ್ಪಿಸುವಂತೆ ನಡೆದ ಮಾತಿನ ಚಕಮಕಿ ಕ್ಷಣಾರ್ಧದಲ್ಲಿ ಹಿಂಸಾಚಾರವಾಗಿ ಮಾರ್ಪಟ್ಟಿದ್ದು, ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಮ್ಮನ ಪರವಾಗಿ ನಿಂತ ವಸಂತ್ ನಾಯ್ಕ್ ಅವರಿಗೆ ಗಂಭೀರ ಗಾಯಗಳಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಲಾಟೆ ತಡೆಯಲು ಬಂದ ಮಹೇಶ್ ನಾಯ್ಕ್ ಮತ್ತು ಪಕ್ಕದ ಮನೆಯ ಕುಮಾರ್ ಎಂಬುವರಿಗೂ ಚಾಕು ಇರಿಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗುರೂಜಿ ಕಮಲಾಕರ್ ಭಟ್, ಸುಚಿತ್ರಾ, ಲೋಕನಾಥ್ ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ.
ಇದು ಪೂರ್ವಯೋಜಿತ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದ್ದು, ಕಾರಿನಲ್ಲಿ ಬಂದ ಇತರರ ಹಿನ್ನೆಲೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೌಟುಂಬಿಕ ಕಲಹಕ್ಕೆ ಜ್ಯೋತಿಷಿಯ ಪ್ರಚೋದನೆ ಮತ್ತು ಪತ್ನಿಯ ಹಠವೇ ಈ ದುರ್ಘಟನೆಗೆ ಕಾರಣವಾಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಇದನ್ನು ಓದಿ: ಬೆಳಗಾವಿ: ಪ್ರೀತಿ ಮಾಡಿ ಮಗ ಓಡಿ ಹೋಗಿದಕ್ಕೆ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣಕ್ಕೆ ಹೊಸ ತಿರುವು






