ಅವರೆಲ್ಲರೂ ತಮ್ಮ ಊರಿನಿಂದ ಉದ್ಯೋಗಕ್ಕಾಗಿ ಕರ್ನಾಟಕಕ್ಕೆ ಬಂದವರು. ಇಲ್ಲಿ ದುಡಿದು ಬದುಕು ಕಟ್ಟಿಕೊಳ್ಳಬೇಕು, ಮನೆಗೆ ಹಣ ಕಳಿಸಬೇಕು ಎಂಬ ಕನಸಿನೊಂದಿಗೆ ಹಗಲು–ರಾತ್ರಿ ಎನ್ನದೆ ಶ್ರಮಿಸುತ್ತಿದ್ದರು. ಆದರೆ ವಿಧಿಯ ಕ್ರೂರಾಟಕ್ಕೆ ಆ ನಾಲ್ವರು ಯುವಕರು ಬಲಿಯಾಗಿದ್ದಾರೆ.
ರಾತ್ರಿ ನಿದ್ರೆಗೆ ಜಾರಿದವರು ಬೆಳಗ್ಗಾಗುವಷ್ಟರಲ್ಲಿ ಶಾಶ್ವತ ನಿದ್ರೆಗೆ ಜಾರಿದ್ದಾರೆ. ಹೊಸಕೋಟೆಯ ಮುತ್ಸಂದ್ರ ಗ್ರಾಮದ ಬಾಡಿಗೆ ಶೆಡ್ನಲ್ಲಿ ನಾಲ್ವರು ಯುವಕರು ಶವವಾಗಿ ಪತ್ತೆಯಾಗಿದ್ದು, ಈ ದುರ್ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮಲಗಿದ್ದ ಸ್ಥಿತಿಯಲ್ಲೇ ಅವರ ಜೀವ ಹೇಗೆ ಕಳೆದುಹೋಯಿತು ಎಂಬ ಪ್ರಶ್ನೆ ಇದೀಗ ಮೂಡಿದೆ.
ಇದನ್ನು ಓದಿ: ದೇವಾಲಯದ ಆವರಣದ ಹೂವಿನ ತೋಟದಲ್ಲಿ ಗಾಂಜಾ ಬೆಳೆದ ಪೂಜಾರಿ ಬಂಧನ
ಇದನ್ನು ಓದಿ: ಲ್ಯಾಪ್ಟಾಪ್ ಬ್ಯಾಟರಿ ಸ್ಫೋಟ: 20 ವರ್ಷದ ಯುವಕ ಸಾವು, ಸಹೋದರಿಗೆ ಗಾಯ
ಇದನ್ನು ಓದಿ: ಮಕ್ಕಳಿಗೆ ಊಟ ಮಾಡಿಸುವಾಗ ಎಚ್ಚರ! ಗಂಟಲಲ್ಲಿ ಅನ್ನ ಸಿಲುಕಿ 2 ವರ್ಷದ ಮಗು ಮೃತಪಟ್ಟ ದುರ್ಘಟನೆ
ಅಸ್ಸಾಂ ರಾಜ್ಯದಿಂದ ಬೆಂಗಳೂರಿಗೆ ಕೆಲಸದ ನಿಮಿತ್ತ ಆಗಮಿಸಿದ್ದ ನಾಲ್ವರು ಯುವಕರು ಈ ದುರಂತಕ್ಕೆ ಬಲಿಯಾಗಿದ್ದಾರೆ. ಹೊಸಕೋಟೆ ತಾಲ್ಲೂಕಿನ ಮುತ್ಸಂದ್ರ ಗ್ರಾಮದಲ್ಲಿರುವ ಛೋಟಾಸಾಬ್ ಅವರಿಗೆ ಸೇರಿದ ಲೇಬರ್ ಶೆಡ್ನಲ್ಲಿ ಅವರು ವಾಸವಾಗಿದ್ದರು. ರಾತ್ರಿ ನಿದ್ರೆಯಲ್ಲೇ ನಾಲ್ವರು ಯುವಕರು ಸಾವನ್ನಪ್ಪಿದ್ದು, ಮೃತರನ್ನು ಜಯಂತ್ ಸಿಂಧೆ ಬಿನ್ ಕೋಗೇಶ್ವರ (25), ನೀರೇಂದ್ರನಾಥ್ ಟೈಡ್ (24), ಡಾಕ್ಟರ್ ಟೈಡ್ (25) ಹಾಗೂ ಧನಂಜಯ್ ಟೈಡ್ (20) ಎಂದು ಗುರುತಿಸಲಾಗಿದೆ.
ಮೃತ ಯುವಕರಲ್ಲಿ ಎಲ್ಲರೂ ಕೋಕಕೋಲಾ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ತಿಳಿದ ತಕ್ಷಣ ಸೋಕೋ ತಂಡ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಚಂದ್ರಕಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆ ರಾತ್ರಿ ಯುವಕರು ಪಾರ್ಟಿ ಮಾಡಿದ್ದು, ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಮದ್ಯದ ನಶೆಯಲ್ಲೇ ಊಟ ಮಾಡಲು ಅನ್ನ ಹಾಕಿದ್ದು, ನಂತರ ಹಾಗೇ ಮಲಗಿಬಿಟ್ಟಿದ್ದಾರೆ. ಗ್ಯಾಸ್ ಮೇಲಿದ್ದ ಪಾತ್ರೆಯಲ್ಲಿ ಅನ್ನ ಸುಟ್ಟು, ರಾತ್ರಿಯಿಡೀ ಹೊಗೆ ಹರಡಿದ ಪರಿಣಾಮ ಉಸಿರುಗಟ್ಟಿದ ಸ್ಥಿತಿಯಲ್ಲಿ ಅವರು ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸದ್ಯ ಶವಗಳನ್ನು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ದೂರದ ಅಸ್ಸಾಂನಿಂದ ದುಡಿಯಲು ಬಂದು ಉತ್ತಮ ಬದುಕಿನ ಕನಸು ಕಂಡಿದ್ದ ಯುವಕರು ಈ ರೀತಿ ದಾರುಣ ಅಂತ್ಯ ಕಂಡಿರುವುದು ನಿಜಕ್ಕೂ ಮನಕಲಕುವ ದುರಂತವಾಗಿದೆ.






