ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ನಾಲ್ಕನೇ ತರಗತಿ ವಿದ್ಯಾರ್ಥಿಯ ಮೇಲೆ ಶಿಕ್ಷಕಿಯೊಬ್ಬರು ಅತಿರೇಕವಾಗಿ ಹಲ್ಲೆ ನಡೆಸಿ, ಈ ವಿಚಾರವನ್ನು ಮನೆಯವರಿಗೆ ತಿಳಿಸಿದರೆ ಕತ್ತು ಹಿಸುಕುವುದಾಗಿ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ನಂದಿನಿ ಲೇಔಟ್ನ ವೀಣಾ ವಿದ್ಯಾ ಸಂಸ್ಥೆಯಲ್ಲಿ ನಡೆದಿದೆ.
ಇದನ್ನು ಓದಿ: ಮಕ್ಕಳಿಗೆ ಊಟ ಮಾಡಿಸುವಾಗ ಎಚ್ಚರ! ಗಂಟಲಲ್ಲಿ ಅನ್ನ ಸಿಲುಕಿ 2 ವರ್ಷದ ಮಗು ಮೃತಪಟ್ಟ ದುರ್ಘಟನೆ
ಇದನ್ನು ಓದಿ: ಕೊಪ್ಪಳ: ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣ ತೀರ್ಪು ಪ್ರಕಟ.. ಎಲ್ಲಾ ಆರೋಪಿಗಳಿಗೆ ಬಿಡುಗಡೆ
ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗೆ ಶಿಕ್ಷಕಿ ಆಂಗ್ಲಿನ್ ಮನಬಂದಂತೆ ಥಳಿಸಿ, ದೇಹದ ಮೇಲೆ ಬಾಸುಂಡೆಗಳು ಮೂಡುವಂತೆ ಹೊಡೆದಿದ್ದಾಳೆ ಎನ್ನಲಾಗಿದೆ.
ಮಗನ ದೇಹದ ಮೇಲೆ ಕಂಡ ಬಾಸುಂಡೆಗಳನ್ನು ನೋಡಿ ತಾಯಿ ಅಚ್ಚರಿಗೊಂಡು ಪ್ರಶ್ನಿಸಿದಾಗ, ಬಾಲಕ ತನ್ನ ಮೇಲೆ ಶಿಕ್ಷಕಿ ಹಿಂಸೆ ನಡೆಸಿರುವುದನ್ನು ವಿವರಿಸಿದ್ದಾನೆ. ಮಹಾರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಲಕ್ಷ್ಮೀ ಎಂಬ ಮಹಿಳೆ ಮಗನನ್ನು ಹಾಸ್ಟೆಲ್ನಲ್ಲಿ ಇರಿಸಿ ನಂದಿನಿ ಲೇಔಟ್ನ ವೀಣಾ ವಿದ್ಯಾ ಸಂಸ್ಥೆಯಲ್ಲಿ ಸೇರಿಸಿದ್ದರು. ಮಗನನ್ನು ನೋಡಲು ಬಂದ ತಾಯಿಗೆ, ಅವನ ದೇಹದ ಮೇಲೆ ಗಾಯದ ಗುರುತುಗಳು ಕಂಡು ಭಾರೀ ಆಘಾತ ಉಂಟಾಗಿದೆ.
ತಾಯಿಯನ್ನು ಕಂಡ ಕ್ಷಣದಲ್ಲೇ ಬಾಲಕ ಕಣ್ಣೀರಿಟ್ಟುಕೊಂಡು, ಶಿಕ್ಷಕಿ ತನ್ನನ್ನು ಹೊಡೆದು ಹಿಂಸಿಸಿರುವುದನ್ನು ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಬಾಲಕನ ತಾಯಿ ಲಕ್ಷ್ಮೀ ಅವರು ಶಾಲೆಯ ಎಚ್ಆರ್ ಹಾಗೂ ಮುಖ್ಯ ಶಿಕ್ಷಕರಿಗೆ ದೂರು ಸಲ್ಲಿಸಿದ್ದಾರೆ. ಆದರೆ ಶಾಲಾ ಆಡಳಿತ ಶಿಕ್ಷಕಿ ಆಂಗ್ಲಿನ್ ಅವರ ಪರವಾಗಿ ನಿಂತು ಸಮರ್ಥನೆ ಮಾಡಿಕೊಂಡಿದೆ ಎನ್ನಲಾಗಿದೆ.
ಶಾಲೆಯ ಪ್ರತಿಕ್ರಿಯೆಯಿಂದ ಬೇಸತ್ತ ತಾಯಿ ಬಳಿಕ ಬಿಇಒ ಅವರಿಗೆ ದೂರು ನೀಡಿದ್ದು, ತಪ್ಪಿತಸ್ಥ ಶಿಕ್ಷಕಿಯನ್ನು ಅಮಾನತುಗೊಳಿಸಬೇಕು ಅಥವಾ ಸಂಬಂಧಿಸಿದ ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ದೂರು ಸ್ವೀಕರಿಸಿರುವ ಬಿಇಒ ತಾರಾನಾಥ್ ಅವರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.






