ಫೆಬ್ರವರಿ 1ರಿಂದ ಫಾಸ್ಟಾಗ್ ಬಳಕೆದಾರರಿಗೆ ದೊಡ್ಡ ನಿರಾಳತೆ ಸಿಗಲಿದೆ. ದೇಶಾದ್ಯಂತ ಟೋಲ್ ಪಾವತಿಗೆ ಕಡ್ಡಾಯವಾಗಿರುವ ಫಾಸ್ಟಾಗ್ ವ್ಯವಸ್ಥೆಯಲ್ಲಿ ಸರ್ಕಾರ ಮಹತ್ವದ ಬದಲಾವಣೆ ತರಲು ಮುಂದಾಗಿದ್ದು, ಈ ಹೊಸ ನಿಯಮದಿಂದ ವಾಹನ ಮಾಲೀಕರಿಗೆ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಕೆವೈಸಿ ಕಿರಿಕಿರಿ ತಪ್ಪಲಿದೆ.
ಇದನ್ನು ಓದಿ: ಸರಕಾರಿ ನೌಕರರು ತಮ್ಮ ಹಿರಿಯ ಪೋಷಕರನ್ನು ನಿರ್ಲಕ್ಷಿಸಿದರೆ ಸಂಬಳಕ್ಕೆ ಬೀಳಲಿದೆ ಕತ್ತರಿ?
ಇದನ್ನು ಓದಿ: ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದ ಮಹತ್ವದ ಶುಭ ಸುದ್ದಿ: ಫೆಬ್ರವರಿ 1, 2026ರಿಂದ 8 ಹೊಸ ಸೌಲಭ್ಯಗಳು ಜಾರಿ
ಇದನ್ನು ಓದಿ: ನಕಲಿ ಕೀಟನಾಶಕಗಳಿಗೆ ಬ್ರೇಕ್: ಕೇಂದ್ರ ಸರ್ಕಾರದ ಕಠಿಣ ಎಚ್ಚರಿಕೆ
ಈವರೆಗೆ ಫಾಸ್ಟಾಗ್ ಹೊಂದಿರುವ ವಾಹನ ಮಾಲೀಕರು ನಿರ್ದಿಷ್ಟ ಅವಧಿಯಲ್ಲಿ ತಮ್ಮ ಕೆವೈಸಿ ಪ್ರಕ್ರಿಯೆಯನ್ನು ಮರುಪೂರ್ಣಗೊಳಿಸಬೇಕಾಗುತ್ತಿತ್ತು. ವಾಹನ ದಾಖಲೆಗಳು, ಫೋಟೋಗಳು, ಸ್ಕ್ಯಾನಿಂಗ್ ಸೇರಿದಂತೆ ಹಲವು ಮಾಹಿತಿಗಳನ್ನು ಸಲ್ಲಿಸಿ ಕೆವೈಸಿ ನವೀಕರಿಸುವುದು ಅನಿವಾರ್ಯವಾಗಿತ್ತು. ಆದರೆ ಫೆಬ್ರವರಿ 1ರಿಂದ ಜಾರಿಯಾಗುವ ಹೊಸ ನಿಯಮದಂತೆ, ಈ ವಾರ್ಷಿಕ ಕೆವೈಸಿ ನಿಯಮವನ್ನು ತೆಗೆದು ಹಾಕಲಾಗಿದೆ.
ಹೊಸ ನೀತಿಯ ಪ್ರಕಾರ, ಮೊದಲ ಬಾರಿಗೆ ಫಾಸ್ಟಾಗ್ ಖರೀದಿಸುವಾಗ ಅಥವಾ ಹೊಸ ವಾಹನ ಖರೀದಿ ಸಂದರ್ಭದಲ್ಲಿ ಒಂದು ಬಾರಿ ಮಾತ್ರ ಕೆವೈಸಿ ಪೂರ್ಣಗೊಳಿಸಿದರೆ ಸಾಕು. ಫಾಸ್ಟಾಗ್ ಸಕ್ರಿಯಗೊಂಡ ಬಳಿಕ ವರ್ಷದಿಂದ ವರ್ಷಕ್ಕೆ ಮತ್ತೆ ಕೆವೈಸಿ ಮಾಡುವ ಅಗತ್ಯ ಇರುವುದಿಲ್ಲ. ಇದರಿಂದ ವಾಹನ ಸವಾರರು ಮತ್ತು ಮಾಲೀಕರು ಅನಗತ್ಯ ದಾಖಲೆ ಸಲ್ಲಿಕೆ ಹಾಗೂ ತಾಂತ್ರಿಕ ತೊಂದರೆಗಳಿಂದ ಮುಕ್ತರಾಗಲಿದ್ದಾರೆ.
ಆದರೆ, ಕೆಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಕೆವೈಸಿ ಅಗತ್ಯವಾಗುತ್ತದೆ. ಫಾಸ್ಟಾಗ್ ದುರ್ಬಳಕೆ ಶಂಕೆ ಎದುರಾದಾಗ, ದೂರು ದಾಖಲಾದಾಗ ಅಥವಾ ಫಾಸ್ಟಾಗ್ ಕಳೆದುಹೋದ ಸಂದರ್ಭಗಳಲ್ಲಿ ಮತ್ತೆ ಕೆವೈಸಿ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಇವುಗಳನ್ನು ಹೊರತುಪಡಿಸಿ ಸಾಮಾನ್ಯ ಬಳಕೆದಾರರಿಗೆ ಕೆವೈಸಿ ನಿಯಮ ಸಡಿಲಗೊಳಿಸಲಾಗಿದೆ.
ಫಾಸ್ಟಾಗ್ ಆಯಕ್ಟಿವೇಶನ್ ವೇಳೆ ಸಂಬಂಧಿತ ಬ್ಯಾಂಕ್ ಸಂಪೂರ್ಣವಾಗಿ ವಾಹನದ ವಿವರಗಳನ್ನು ಪರಿಶೀಲಿಸಲಿದೆ. ವಾಹನ ನೋಂದಣಿ ಸಂಖ್ಯೆ, ಚಾಸಿ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ವೆರಿಫೈ ಮಾಡಿದ ಬಳಿಕವೇ ಫಾಸ್ಟಾಗ್ ಸಕ್ರಿಯಗೊಳ್ಳಲಿದೆ. ಆನ್‌ಲೈನ್ ಮೂಲಕ ಫಾಸ್ಟಾಗ್ ಖರೀದಿಸಿದರೂ ಇದೇ ನಿಯಮ ಅನ್ವಯವಾಗುತ್ತದೆ. ಖರೀದಿಸುವ ಬ್ಯಾಂಕ್ ವಾಹನದ ಪರಿಶೀಲನೆ ನಡೆಸಿ ಫಾಸ್ಟಾಗ್ ನೀಡುತ್ತದೆ.
ಈ ಬದಲಾವಣೆಯಿಂದ ಟೋಲ್ ಪ್ಲಾಜಾಗಳಲ್ಲಿ ಫಾಸ್ಟಾಗ್ ಸಂಬಂಧಿತ ತಾಂತ್ರಿಕ ಸಮಸ್ಯೆಗಳು ಕಡಿಮೆಯಾಗುವ ನಿರೀಕ್ಷೆಯಿದ್ದು, ವಾಹನ ಸವಾರರಿಗೆ ಹೆಚ್ಚು ಸುಗಮ ಮತ್ತು ವೇಗದ ಪ್ರಯಾಣ ಅನುಭವ ಸಿಗಲಿದೆ. ಫಾಸ್ಟಾಗ್ ಬಳಕೆದಾರರಿಗೆ ಇದು ಮಹತ್ವದ ಹಾಗೂ ಅನುಕೂಲಕರ ಬದಲಾವಣೆ ಎಂದು ಹೇಳಲಾಗುತ್ತಿದೆ.






