---Advertisement---

ಅಂದದ ಹಿಂದೆ ಕಳ್ಳತನ: ಮೇಕಪ್‌ಗೆ ತಿಂಗಳಿಗೆ ₹5 ಲಕ್ಷ ಖರ್ಚು ಮಾಡಿದ ಸುಂದರಿ ಹಾಗೂ ಪತಿ ಸೆರೆ

On: January 29, 2026 5:07 AM
Follow Us:
---Advertisement---

ಅಂದವಾಗಿ ಮೇಕಪ್ ಮಾಡಿಕೊಂಡು ಮಿರಮಿರ ಮಿಂಚುವ ದಿರಿಸು ಧರಿಸಿ ಜಾತ್ರೆ ಹಾಗೂ ದೇವಾಲಯಗಳಿಗೆ ತೆರಳಿ ಜೇಬುಗಳ್ಳತನ ಮಾಡುತ್ತಿದ್ದ ಸುಂದರಿ ಮತ್ತು ಆಕೆಯ ಪತಿಯನ್ನು ಬೆಂಗಳೂರು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ, ಆರೋಪಿತ ಮಹಿಳೆ ಪ್ರತಿ ತಿಂಗಳು ಮೇಕಪ್‌ಗೇ 4 ರಿಂದ 5 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದಿದ್ದು, ಈ ದುಬಾರಿ ಮೇಕಪ್ ಕಥೆ ಪೊಲೀಸರನ್ನೇ ಅಚ್ಚರಿ ಮೂಡಿಸಿದೆ.

ಕಮ್ಮಸಂದ್ರ ಸಮೀಪದ ಸಂಪಿಗೆ ನಗರದ ಗಾಯತ್ರಿ ಹಾಗೂ ಶ್ರೀಕಾಂತ್ ಬಂಧಿತ ಆರೋಪಿಗಳು. ಇವರಿಂದ ಸುಮಾರು 60 ಲಕ್ಷ ರೂಪಾಯಿ ಮೌಲ್ಯದ 398 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಇತ್ತೀಚೆಗೆ ದೇವಸಂದ್ರದ ಮಾರಿಯಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ, ಕುವೆಂಪು ಲೇಔಟ್‌ನ ಲಕ್ಷ್ಮಮ್ಮ ಅವರಿಂದ 30 ಗ್ರಾಂ ತೂಕದ ಚಿನ್ನದ ಸರ ಕಳವಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಇನ್ಸ್‌ಪೆಕ್ಟರ್ ಬಿ. ರಾಮಮೂರ್ತಿ ನೇತೃತ್ವದ ತಂಡವು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಈ ಖದೀಮ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ಪಾತ್ರೆ ವ್ಯಾಪಾರದಿಂದ ಕಳ್ಳತನದ ದಾರಿ

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಹಂಪಾಪುರದ ಚಿಕ್ಕೆಹೆರೂರು ಪೈಲ್ವಾನ್ ಕಾಲೋನಿಯ ಗಾಯತ್ರಿ ಹಾಗೂ ಶ್ರೀಕಾಂತ್ ದಂಪತಿ ವಿವಾಹವಾಗಿ, ಬಳಿಕ ಕಮ್ಮಸಂದ್ರ ಸಮೀಪ ನೆಲೆಸಿದ್ದರು. ಆರಂಭದಲ್ಲಿ ಕೂದಲು ಮತ್ತು ಪಾತ್ರೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಸತಿ–ಪತಿ, ಐಷಾರಾಮಿ ಜೀವನದ ಆಕರ್ಷಣೆಗೆ ಒಳಗಾಗಿ ತಪ್ಪು ದಾರಿಗೆ ಸಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಬಿಎಂಟಿಸಿ ಬಸ್‌ಗಳು, ಜಾತ್ರೆಗಳು, ದೇವಾಲಯಗಳು ಹಾಗೂ ಸಂತೆಗಳಲ್ಲಿ ಜೇಬುಗಳ್ಳತನ ಆರಂಭಿಸಿದ್ದರು. ಈ ದಂಪತಿಯ ವಿರುದ್ಧ ಹುಣಸೂರು, ಚಿಕ್ಕಬಳ್ಳಾಪುರ, ಚನ್ನರಾಯಪಟ್ಟಣ, ತಿರುಮಾನಿ ಮತ್ತು ದೊಡ್ಡಬಳ್ಳಾಪುರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಜೈಲು ವಾಸ ಅನುಭವಿಸಿರುವುದೂ ವಿಚಾರಣೆಯಲ್ಲಿ ತಿಳಿದುಬಂದಿದೆ.

ಮೇಕಪ್ ಮಾಡಿಕೊಂಡರೆ ಯಾರಿಗೂ ಅನುಮಾನ ಬರ್ತಿರಲಿಲ್ಲ’ – ಗಾಯತ್ರಿ

ತನ್ನ ಮೇಲೆ ಯಾರಿಗೂ ಶಂಕೆ ಬರದಂತೆ ಎಚ್ಚರಿಕೆ ವಹಿಸುತ್ತಿದ್ದ ಗಾಯತ್ರಿ, ಅಂದವಾಗಿ ಮೇಕಪ್ ಮಾಡಿಕೊಂಡು ದುಬಾರಿ ಸೀರೆ ಧರಿಸಿ ದೇವಾಲಯ ಹಾಗೂ ಜಾತ್ರೆಗಳಿಗೆ ಹೋಗುತ್ತಿದ್ದಳು. ಪ್ರತಿ ತಿಂಗಳು ಮೇಕಪ್ ಮತ್ತು ಸೌಂದರ್ಯೋಪಚಾರಗಳಿಗೆ 4 ರಿಂದ 5 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದೆ ಎಂದು ಆಕೆ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

“ಮೇಕಪ್ ಇಲ್ಲದೆ ಹೊರಗೆ ಹೋಗೋಕೆ ಆಗಲ್ಲ. ಚೆನ್ನಾಗಿ ಕಾಣಿಸಿಕೊಂಡು ಹೋದರೆ ಯಾರಿಗೂ ಅನುಮಾನ ಬರೋದಿಲ್ಲ. ಇದರಿಂದ ಆಭರಣ ಧರಿಸಿದ ಮಹಿಳೆಯರ ಸನಿಹಕ್ಕೆ ಹೋಗಿ ಕಳ್ಳತನ ಮಾಡಲು ಸುಲಭವಾಗುತ್ತಿತ್ತು” ಎಂದು ಗಾಯತ್ರಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ.

Join WhatsApp

Join Now

RELATED POSTS

Leave a Comment