ಕೆಲವರಿಗೆ ಸಿಹಿಯಾದ ಆಹಾರಗಳನ್ನು ಸೇವಿಸುವುದು ವಿಶೇಷವಾದ ಸಂತೋಷವನ್ನು ನೀಡುತ್ತದೆ. ದಿನನಿತ್ಯದ ಊಟ–ತಿಂಡಿಗಿಂತಲೂ ಹೆಚ್ಚಾಗಿ ಸ್ವೀಟ್ಸ್ ತಿನ್ನಬೇಕು ಎಂಬ ಆಸೆ ಇವರಲ್ಲಿ ಕಂಡುಬರುತ್ತದೆ. ಹೀಗೆ ಸಿಹಿ ತಿನ್ನುವ ಬಯಕೆ ನಿಧಾನವಾಗಿ ಅಭ್ಯಾಸವಾಗಿ, ದಿನಚರಿಯ ಅವಿಭಾಜ್ಯ ಭಾಗವಾಗಿಬಿಡುತ್ತದೆ.
ಕೆಲವೊಮ್ಮೆ ಊಟವಾದ ತಕ್ಷಣವೇ ಅಥವಾ ಊಟಕ್ಕೂ ಮುನ್ನವೇ ಸಮಯದ ಅರಿವಿಲ್ಲದೆ ಸಿಹಿ ಬೇಕೆಂದು ಅನಿಸುತ್ತದೆ. ಆರಂಭದಲ್ಲಿ ಇದು ಸಾಮಾನ್ಯವೆನಿಸಿದರೂ, ಆಗಾಗ ಈ ರೀತಿಯ ಆಸೆ ಉಂಟಾದರೆ ಅದು ಗಮನಿಸಬೇಕಾದ ವಿಷಯವಾಗುತ್ತದೆ. ಸಿಹಿತಿನಿಸುಗಳು ತಾತ್ಕಾಲಿಕವಾಗಿ ಮನಸ್ಸಿಗೆ ನೆಮ್ಮದಿ ಹಾಗೂ ಶಕ್ತಿಯನ್ನು ನೀಡುವ ಕಾರಣ, ದಣಿವು ಅಥವಾ ಒತ್ತಡದ ಸಮಯದಲ್ಲಿ ಹಲವರು ಅದಕ್ಕೆ ಹೆಚ್ಚು ಆಕರ್ಷಿತರಾಗುತ್ತಾರೆ.
ಇದನ್ನು ಓದಿ: ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಬಯಸುತ್ತಿದ್ದೀರಾ? ಹಾಗಿದ್ರೆ ಮಲಗುವ ಮುನ್ನ ಈ ಸರಳ ಕ್ರಮಗಳನ್ನು ಅನುಸರಿಸಿ..
ಇದನ್ನು ಓದಿ: ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ: ಆರೋಗ್ಯಕ್ಕೆ ಎಚ್ಚರಿಕೆ
ಆದರೆ ಅತಿಯಾದ ಸೇವನೆಯು ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದನ್ನು ಮರೆಯಬಾರದು. ವೈದ್ಯರ ಅಭಿಪ್ರಾಯದಂತೆ, ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆ ಕೇವಲ ರುಚಿಗೆ ಸೀಮಿತವಲ್ಲ. ಹಲವರಲ್ಲಿ ಇದು ಅವರ ದಿನಚರಿ ಮತ್ತು ಜೀವನಶೈಲಿಯ ಪರಿಣಾಮವಾಗಿರುತ್ತದೆ. ಅಸಮಯದ ಊಟ, ದೀರ್ಘಕಾಲ ಹಸಿವಿನಿಂದ ಇರುವುದು ಅಥವಾ ಹೆಚ್ಚಾಗಿ ಜಂಕ್ ಫುಡ್ ಸೇವಿಸುವುದು ಈ ಬಯಕೆಯನ್ನು ಹೆಚ್ಚಿಸಬಹುದು.
ಜೊತೆಗೆ, ಮಾನಸಿಕ ಒತ್ತಡ, ಸರಿಯಾದ ನಿದ್ರೆಯ ಕೊರತೆ ಮತ್ತು ದೈಹಿಕ ಆಯಾಸವೂ ಸಿಹಿ ತಿನ್ನುವ ಹಂಬಲಕ್ಕೆ ಕಾರಣವಾಗುತ್ತದೆ. ಕೆಲವರು ತುಂಬಾ ದಣಿದಾಗ ತಕ್ಷಣ ಶಕ್ತಿ ಬರಲೆಂದು ಸಿಹಿತಿನಿಸುಗಳನ್ನು ಆಯ್ಕೆ ಮಾಡುತ್ತಾರೆ. ಇಂತಹ ಕ್ರಮ ಮುಂದುವರಿದಂತೆ, ಅದು ಅಭ್ಯಾಸವಾಗಿ, ಸಿಹಿ ಇಲ್ಲದೆ ಇರಲು ಸಾಧ್ಯವಿಲ್ಲವೆಂಬ ಭಾವನೆ ಮೂಡುತ್ತದೆ.
ನಿರಂತರವಾಗಿ ಸಿಹಿತಿನಿಸುಗಳನ್ನು ಸೇವಿಸುವುದರಿಂದ ದೇಹದಲ್ಲಿ ಹಲವು ಬದಲಾವಣೆಗಳು ಸಂಭವಿಸಬಹುದು. ಇದು ತೂಕ ಹೆಚ್ಚಳ ಮತ್ತು ಬೊಜ್ಜುತನಕ್ಕೆ ದಾರಿ ಮಾಡಿಕೊಡಬಹುದು. ಹೆಚ್ಚು ಸಕ್ಕರೆ ಸೇವನೆಯಿಂದ ರಕ್ತದ ಸಕ್ಕರೆ ಮಟ್ಟದಲ್ಲಿ ಏರುಪೇರು ಉಂಟಾಗಿ, ಮಧುಮೇಹದ ಅಪಾಯ ಹೆಚ್ಚಾಗುತ್ತದೆ.
ಹಲ್ಲುಗಳಲ್ಲಿ ಹುಳುಕು, ದೇಹದ ದುರ್ಬಲತೆ ಮತ್ತು ನಿರಂತರ ಆಯಾಸದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವರಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಹಾಗೂ ಚರ್ಮದ ಸಮಸ್ಯೆಗಳೂ ಹೆಚ್ಚಾಗುತ್ತವೆ. ಈ ಅಭ್ಯಾಸ ದೀರ್ಘಕಾಲ ಮುಂದುವರಿದರೆ, ಹೃದಯದ ಆರೋಗ್ಯಕ್ಕೂ ಹಾನಿಯಾಗುವ ಸಾಧ್ಯತೆ ಇದೆ.
ಇದನ್ನು ಓದಿ: ಕುಂಬಳಕಾಯಿ ಬೀಜಗಳ ಆರೋಗ್ಯ ಪ್ರಯೋಜನಗಳು: ಚಿಕ್ಕದಾಗಿದ್ದರೂ ಅಸಾಧಾರಣ ಪೌಷ್ಟಿಕಾಂಶ
ಸಿಹಿತಿನಿಸುಗಳ ಮೇಲಿನ ಅತಿಯಾದ ಆಸೆಯನ್ನು ನಿಯಂತ್ರಿಸಲು ಸಮತೋಲಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಸಮಯಕ್ಕೆ ಸರಿಯಾಗಿ ಊಟ ಮತ್ತು ತಿಂಡಿ ಸೇವಿಸಿ, ಹೆಚ್ಚು ಹೊತ್ತು ಹಸಿವಿನಿಂದ ಇರದಿರುವುದು ಸಹಾಯಕರವಾಗುತ್ತದೆ. ದಿನವೂ ಸಾಕಷ್ಟು ನೀರು ಕುಡಿಯುವುದು ಮತ್ತು ಗುಣಮಟ್ಟದ ನಿದ್ರೆ ಪಡೆಯುವುದು ದೇಹದ ಸಮತೋಲನವನ್ನು ಕಾಪಾಡುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಯೋಗ, ಧ್ಯಾನ ಅಥವಾ ಲಘು ವ್ಯಾಯಾಮಗಳನ್ನು ಅಭ್ಯಾಸ ಮಾಡಬಹುದು.
ಸಿಹಿತಿನಿಸುಗಳ ಬದಲು ಹಣ್ಣುಗಳು, ಒಣಹಣ್ಣುಗಳು ಅಥವಾ ಆರೋಗ್ಯಕರ ತಿಂಡಿಗಳನ್ನು ಆಯ್ಕೆ ಮಾಡುವುದು ಒಳ್ಳೆಯದು. ಈ ಎಲ್ಲ ಕ್ರಮಗಳ ಜೊತೆಗೆ, ಸಿಹಿತಿನಿಸುಗಳ ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಹೋದರೆ, ಈ ಅಭ್ಯಾಸವನ್ನು ಸುಲಭವಾಗಿ ನಿಯಂತ್ರಿಸಬಹುದು.






