ಕಲಬುರಗಿ: ಹೆಚ್ಚಿನ ಲಾಭದ ಆಮಿಷವೊಡ್ಡಿ ನಕಲಿ ಟ್ರೇಡಿಂಗ್ ಆ್ಯಪ್ನಲ್ಲಿ ಹೂಡಿಕೆ ಮಾಡಲು ಪ್ರಚೋದಿಸಿದ ಸೈಬರ್ ವಂಚಕರು ನಗರದ ಕೆಎಸ್ಐಎಸ್ಎಫ್ನ ಹೆಡ್ಕಾನ್ಸ್ಟೆಬಲ್ಗೆ ₹80.40 ಲಕ್ಷ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ಅಕ್ಕಮಹಾದೇವಿ ಕಾಲೊನಿಯ ನಿವಾಸಿ ಮಹೇಶ್ ಸಜ್ಜನ ವಂಚನೆಗೊಳಗಾದವರು.
ದೂರುದಾರರ ಪ್ರಕಾರ, ಆರು ತಿಂಗಳ ಹಿಂದೆ ಅವರು ಗ್ರೋ ಆ್ಯಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರು. ಈ ನಡುವೆ 2025ರ ನವೆಂಬರ್ 21ರಂದು ಅವರ ಮೊಬೈಲ್ ಸಂಖ್ಯೆಯನ್ನು ‘ಸ್ಟಾಕ್ ಮಾರ್ಕೆಟ್ ಥಿಂಕ್ ಟ್ಯಾಂಕ್’ ಎಂಬ ವಾಟ್ಸ್ಆ್ಯಪ್ ಗುಂಪಿಗೆ ಸೇರಿಸಲಾಯಿತು. ಗುಂಪಿನ ಸದಸ್ಯರು ಹೆಚ್ಚಿನ ಹೂಡಿಕೆ ಮಾಡಿದರೆ ಅಪಾರ ಲಾಭ ಸಿಗುತ್ತದೆ ಎಂದು ನಂಬಿಸಿ, ನಕಲಿ ಟ್ರೇಡಿಂಗ್ ಪ್ಲಾಟ್ಫಾರ್ಮ್ನಲ್ಲಿ ಖಾತೆ ತೆರೆಯುವಂತೆ ಸೂಚಿಸಿದರು.
ಇದನ್ನು ಓದಿ: ಕಲಬುರಗಿ: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವೃದ್ಧ ದಂಪತಿಗೆ ₹1.30 ಕೋಟಿ ವಂಚನೆ
ಅದರಂತೆ 2025ರ ಡಿಸೆಂಬರ್ 16ರಿಂದ 2026ರ ಜನವರಿ 16ರವರೆಗೆ, ಮಹೇಶ್ ಅವರು ತಮ್ಮ ಎರಡು ಬ್ಯಾಂಕ್ ಖಾತೆಗಳಿಂದ ಕ್ರಮವಾಗಿ ₹34.05 ಲಕ್ಷ ಮತ್ತು ₹27.35 ಲಕ್ಷ, ಜೊತೆಗೆ ಸ್ನೇಹಿತನ ಖಾತೆಯಿಂದ ₹19 ಲಕ್ಷ ಸೇರಿ ಒಟ್ಟು ₹80.40 ಲಕ್ಷವನ್ನು RTGS ಹಾಗೂ IMPS ಮೂಲಕ ಹಂತ ಹಂತವಾಗಿ ವರ್ಗಾವಣೆ ಮಾಡಿದರು.
ನಕಲಿ ಟ್ರೇಡಿಂಗ್ ಖಾತೆಯಲ್ಲಿ ₹6 ಕೋಟಿಗೂ ಅಧಿಕ ಲಾಭ ತೋರಿಸಲಾಗಿತ್ತು. ಆದರೆ ಹಣವನ್ನು ವಿತ್ಡ್ರಾ ಮಾಡಲು ಯತ್ನಿಸಿದಾಗ ₹96 ಲಕ್ಷ ತೆರಿಗೆ ಪಾವತಿಸಬೇಕು ಎಂದು ತಿಳಿಸಲಾಗಿದೆ. ಇದರಿಂದ ಅನುಮಾನಗೊಂಡ ಮಹೇಶ್ ಅವರು ಸ್ನೇಹಿತ ಹಾಗೂ ಸಹೋದರರೊಂದಿಗೆ ಚರ್ಚಿಸಿದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ.
ಈ ಸಂಬಂಧ ಕಲಬುರಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






