ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕರೂ ಅದನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಮಾಣಿಕತೆ ಮೆರೆದ ರಿತ್ತಿ ಕುಟುಂಬಕ್ಕೆ ರಾಜ್ಯ ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸಿದೆ.
ಲಕ್ಕುಂಡಿಯಲ್ಲಿ ಮನೆ ನಿರ್ಮಾಣದ ವೇಳೆ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸುಮಾರು 460 ಗ್ರಾಂ ಚಿನ್ನಾಭರಣ ದೊರೆತಿತ್ತು. ಈ ನಿಧಿಯನ್ನು ಯಾವುದೇ ಲಾಭಾಸಕ್ತಿಯಿಲ್ಲದೆ ಸರ್ಕಾರಕ್ಕೆ ಹಸ್ತಾಂತರಿಸಿದ ಕುಟುಂಬಕ್ಕೆ ಗಣರಾಜ್ಯೋತ್ಸವದ ದಿನ ವಿಶೇಷ ಗೌರವ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಅದರಂತೆ ಜನವರಿ 26ರಂದು ಸರ್ಕಾರ ಕುಟುಂಬಕ್ಕೆ ಬಂಪರ್ ಗಿಫ್ಟ್ ನೀಡಿದೆ.
ಇದನ್ನು ಓದಿ: ಕರ್ನಾಟಕದಲ್ಲಿ ಲಕ್ಕುಂಡಿಯ ಅಚ್ಚರಿ: ಅಮೂಲ್ಯ ಚಿನ್ನ ಮತ್ತು ಅನ್ಯಗ್ರಹ ಲೋಹಗಳ ನಿಕ್ಷೇಪ ಪತ್ತೆ!
ಗದಗ ನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣದ ಬಳಿಕ ಸಚಿವ ಎಚ್.ಕೆ. ಪಾಟೀಲ್ ಅವರು ಮಹತ್ವದ ಘೋಷಣೆ ಮಾಡಿದ್ದಾರೆ.
ನಿವೇಶನ ಮತ್ತು ಆರ್ಥಿಕ ನೆರವು
ಪ್ರಮಾಣಿಕತೆಗೆ ಮಾದರಿಯಾದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 30×40 ಅಳತೆಯ ನಿವೇಶನ ಮಂಜೂರು ಮಾಡಲಾಗಿದೆ. ಜೊತೆಗೆ ಮನೆ ನಿರ್ಮಾಣಕ್ಕೆ ನೆರವಾಗುವ ಉದ್ದೇಶದಿಂದ 5 ಲಕ್ಷ ರೂಪಾಯಿ ನಗದು ಸಹಾಯ ನೀಡಲಾಗಿದೆ. ಅಲ್ಲದೇ ಪ್ರಜ್ವಲ್ ಅವರ ತಾಯಿ ಕಸ್ತೂರೆವ್ವ ರಿತ್ತಿ ಅವರಿಗೆ ಹೊರಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಲಾಗುವುದಾಗಿ ಸರ್ಕಾರ ಘೋಷಿಸಿದೆ.
ಗಣರಾಜ್ಯೋತ್ಸವದಂದು ಸನ್ಮಾನ
8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರಜ್ವಲ್ ರಿತ್ತಿ ಹಾಗೂ ಅವರ ತಾಯಿ ಕಸ್ತೂರೆವ್ವ ಅವರನ್ನು ಗಣರಾಜ್ಯೋತ್ಸವ ಸಂಭ್ರಮದಲ್ಲಿ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಸಚಿವ ಎಚ್.ಕೆ. ಪಾಟೀಲ್ ಅವರು ಕುಟುಂಬಕ್ಕೆ ನಿವೇಶನ ಪ್ರಮಾಣಪತ್ರ ಹಾಗೂ ಕಸ್ತೂರೆವ್ವ ಅವರಿಗೆ ಉದ್ಯೋಗ ಆದೇಶ ಪತ್ರವನ್ನು ವಿತರಿಸಿದರು.
ಲಕ್ಕುಂಡಿಯಲ್ಲಿ ಮುಂದುವರಿದ ಉತ್ಖನನ
ನಿಧಿ ಪತ್ತೆಯಾದ ನಂತರ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಚುರುಕುಗೊಂಡಿದ್ದು, ಕಳೆದ ಎಂಟು ದಿನಗಳಿಂದ ನಿರಂತರವಾಗಿ ಕಾರ್ಯ ನಡೆಯುತ್ತಿದೆ. ಈ ವೇಳೆ ಹಲವು ಅಪರೂಪದ ಹಾಗೂ ಪುರಾತನ ವಸ್ತುಗಳು ಪತ್ತೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ಖನನ ಕಾರ್ಯ ಇನ್ನಷ್ಟು ವೇಗ ಪಡೆಯುವ ಸಾಧ್ಯತೆ ಇದೆ.






