ಉತ್ತರ ಪ್ರದೇಶದ ಹಾಪುರ್ ಕಣ್ಣೀರಿನ ಕ್ಷಣವೊಂದಕ್ಕೆ ಸಾಕ್ಷಿಯಾಯ್ತು, ಮಡಿದ ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ಅವರ 1 ವರ್ಷದ ಪುತ್ರ ಬೆಂಕಿ ಇಡುತ್ತಿರುವ ದೃಶ್ಯ ಎಂಥಹವರ ಕಣ್ಣಿನಲ್ಲೂ ನೀರು ತರುವಂತೆ ಮಾಡಿತ್ತು. ಹೌದು ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಗುರುವಾರ ಸೇನಾ ಟ್ರಕ್ಕೊಂದು ಕಂದಕಕ್ಕೆ ಉರುಳಿದ ಪರಿಣಾಮ ಅದರಲ್ಲಿ 10 ಯೋಧರು ದಾರುಣವಾಗಿ ಸಾವನ್ನಪ್ಪಿದ್ದರು.
ಹೀಗೆ ದುರಂತಮಯವಾಗಿ ಸಾವನ್ನಪ್ಪಿದ ಯೋಧರಲ್ಲಿ ಉತ್ತರ ಪ್ರದೇಶದ ಹಾಪುರ್ನ ರಿಂಕೆಲ್ ಬಲ್ಯಾನ್ ಅವರು ಕೂಡ ಒಬ್ಬರು. 2016ರಲ್ಲಷ್ಟೇ ಸೇನೆಗೆ ಸೇರಿದ್ದ ಅವರಿಗೆ ವರ್ಷದ ಹಿಂದಷ್ಟೇ ಮಗು ಜನಿಸಿತ್ತು. ಆದರೆ ಈಗ ಅವರ ಹಠಾತ್ ಸಾವು ಕುಟುಂಬವನ್ನು ಕಂಗೆಡಿಸಿದೆ.
ಇದನ್ನು ಓದಿ: ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ: ಆರೋಗ್ಯಕ್ಕೆ ಎಚ್ಚರಿಕೆ
ರಿಂಕೆಲ್ ಬಲ್ಯಾನ್ ಅವರ ಪಾರ್ಥಿವ ಶರೀರ ಶನಿವಾರ ಸ್ವಗ್ರಾಮಕ್ಕೆ ಆಗಮಿಸಿದ್ದು, ಅವರ ಒಂದು ವರ್ಷದ ಮಗು ಅಪ್ಪನ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನಡೆಸಿ ಚಿತೆಗೆ ಬೆಂಕಿ ಇಟ್ಟಾಗ ಅಲ್ಲಿದ್ದವರ ಕಣ್ಣುಗಳಲ್ಲಿ ತಡೆದುಕೊಳ್ಳಲಾಗದಂತೆ ಕಣ್ಣೀರು ಒಸರಲು ಆರಂಭಿಸಿತ್ತು. ಈ ಕ್ಷಣಕ್ಕೆ ಸಾಕ್ಷಿಯಾದ ಜಿಲ್ಲಾಧಿಕಾರಿ ಅಭಿಷೇಕ್ ಪಾಂಡೆ ಅವರ ಕಣ್ಣುಗಳಲ್ಲೂ ನೀರು ಜಿನುಗಿದವು.
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಗುರುವಾರ ಗುಂಡು ನಿರೋಧಕ ಸೇನಾ ಟ್ರಕ್ ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ರಿಂಕೆಲ್ ಬಲ್ಯಾನ್ ಮತ್ತು ಇತರ ಒಂಬತ್ತು ಸೈನಿಕರು ಹುತಾತ್ಮರಾದರು. ಅಪಘಾತದಲ್ಲಿ ಹನ್ನೊಂದು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ: ಬೆಂಗಳೂರು: ಮಹಿಳೆಯರ ಒಳ ಉಡುಪು ಕದಿಸಿರುವ ವಿಕೃತಿ ಕಾಮಿ ಬಂಧನ
ರಿಂಕೆಲ್ ಬಲ್ಯಾನ್ ಅವರ ಒಂದು ವರ್ಷದ ಪುತ್ರ ತನ್ನ ಚಿಕ್ಕಪ್ಪನ ತೊಡೆಯಲ್ಲಿ ಕುಳಿತುಕೊಂಡು ಚಿತೆಗೆ ಸುತ್ತು ಬಂದು ಬೆಂಕಿ ಇಡುತ್ತಿದ್ದ ದೃಶ್ಯ ಎಂಥಹವರ ಕಣ್ಣಾಲಿಗಳನ್ನು ತೇವಗೊಳಿಸಿದವು. 2016ರಲ್ಲಷ್ಟೇ ಸೇನೆಗೆ ಸೇರಿದ್ದ ರಿಂಕೆಲ್ ಬಲ್ಯಾನ್ ಅವರು ಪ್ರಯಾಣಿಸುತ್ತಿದ್ದ ಸೇನಾ ವಾಹನ 200 ಅಡಿ ಆಳದ ಕಂದಕಕ್ಕೆ ಬಿದ್ದ ನಂತರ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಯ ಮಧ್ಯೆ ಅವರು ಸಾವನ್ನಪ್ಪಿದ್ದರು. ಹೀಗಾಗಿ ಅವರ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮಿಸಿದಾಗ ಭಾರಿ ಸಂಖ್ಯೆಯಲ್ಲಿ ಜನ ಸೇರಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಅವರ ತಾಯಿ ವಿಚಾರ ತಿಳಿದು ಸ್ಥಳದಲ್ಲೇ ಕುಸಿದರೆ ಅವರ ಪತ್ನಿ ರಿಂಕಿ ಅವರನ್ನು ಸಮಾಧಾನಗೊಳ್ಳುವ ಸ್ಥಿತಿಯಲ್ಲಿರಲಿಲ್ಲ.
ರಿಂಕೆಲ್ ಬಲ್ಯಾನ್ ಅವರಿಗೆ ಬಲವಾದ ಮಿಲಿಟರಿ ಹಿನ್ನೆಲೆ ಇದೆ. ಅವರ ತಂದೆಯೂ ಮಾಜಿ ಯೋಧರಾಗಿದ್ದು, ಅವರ ಸೋದರ ರಿಷಭ್ ಅವರು ಈಗಾಗಲೇ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪೋಷಕರು, ಪತ್ನಿ, ಎಳೆ ಪ್ರಾಯದ ಮಗನನ್ನು ಅವರು ಅಗಲಿದ್ದಾರೆ.
ಕಾಶ್ಮೀರದಲ್ಲಿ ನಡೆದ ಈ ದುರಂತದಲ್ಲಿ ಮಡಿದ ಯೋಧರಿಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದರು. ದೋಡಾದಲ್ಲಿ ಸಂಭವಿಸಿದ ಅಪಘಾತದಿಂದ ನಾವು ತೀವ್ರ ದುಃಖಿತರಾಗಿದ್ದೇವೆ, ಇದರಲ್ಲಿ ನಾವು ನಮ್ಮ ಧೈರ್ಯಶಾಲಿ ಸೇನಾ ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. ರಾಷ್ಟ್ರ ಅವರ ಸೇವೆಯನ್ನು ಶಾಶ್ವತವಾಗಿ ಸ್ಮರಿಸಲಿದೆ ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಹಾಗೆಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಯೋಧರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದರು. ದೋಡಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾವು ಭಾರತೀಯ ಸೇನೆಯ 10 ವೀರ ಸೈನಿಕರನ್ನು ಕಳೆದುಕೊಂಡಿದ್ದೇವೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ ಎಂದು ರಾಜನಾಥ್ ಸಿಂಗ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.






