ಆಫೀಸ್‌ಗೆ ಹೊರಡುವವರು, ಶಾಲೆಗೆ ಹೋಗುವ ಮಕ್ಕಳು, ಹೊಲಗಳಿಗೆ ಹೋಗುವ ರೈತ ಯಾರೇ ಆಗಿರಲಿ, ನೀರಿನ ಬಾಟಲಿ ಜೊತೆಗಿರುವುದು ಈಗ ಸಾಮಾನ್ಯ. ಆದರೆ ನಾವು ಯಾವ ಬಾಟಲಿಯಿಂದ ನೀರು ಕುಡಿಯುತ್ತೇವೆ ಎನ್ನುವುದೇ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಕೆಲ ಬಾಟಲಿಗಳು ಸುರಕ್ಷಿತವಾಗಿದ್ದರೆ, ಇನ್ನೂ ಕೆಲವು ದೇಹಕ್ಕೆ ನಿಧಾನವಾಗಿ ಹಾನಿ ಮಾಡುತ್ತವೆ.
ಸ್ಟೀಲ್ ಅಥವಾ ಉಕ್ಕಿನ ಬಾಟಲಿಗಳು ದೈನಂದಿನ ಬಳಕೆಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ನೀರು ಹಗುರವಾಗಿ ಉಳಿಯುತ್ತದೆ ಮತ್ತು ಬಹುತೇಕ ನಿರೋಧಕ ಗುಣ ಹೊಂದಿರುತ್ತದೆ. ಬಿಸಿ ಅಥವಾ ತಂಪು ನೀರನ್ನು ದೀರ್ಘಕಾಲ ಹಾಗೆಯೇ ಉಳಿಸಿಕೊಳ್ಳುವ ಸಾಮರ್ಥ್ಯವೂ ಇದೆ. ಆದರೆ ಇವುಗಳನ್ನು ಸರಿಯಾಗಿ ಹಾಗೂ ನಿಯಮಿತವಾಗಿ ತೊಳೆಯದೇ ಇದ್ದರೆ, ನೀರಿಗೆ ಲೋಹದ ರುಚಿ ಮತ್ತು ವಾಸನೆ ಬರಲು ಸಾಧ್ಯ. ಸ್ವಚ್ಛತೆಗೆ ಸ್ವಲ್ಪ ಹೆಚ್ಚಿನ ಗಮನ ಬೇಕಾದರೂ, ಸರಿಯಾಗಿ ಬಳಸಿದರೆ ನಿತ್ಯದ ಬಳಕೆಗೆ ಸೂಕ್ತ.
ಇದನ್ನು ಓದಿ: ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ: ಆರೋಗ್ಯಕ್ಕೆ ಎಚ್ಚರಿಕೆ
ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ಪ್ಲಾಸ್ಟಿಕ್‌ನಲ್ಲಿ ಇರುವ ಕೆಲವು ರಾಸಾಯನಿಕಗಳು ನೀರಿನೊಂದಿಗೆ ಬೆರೆತು ದೇಹದೊಳಗೆ ಪ್ರವೇಶಿಸುವ ಸಾಧ್ಯತೆ ಇದೆ. ಇವು ರಕ್ತ ಸಂಚಲನದ ಮೂಲಕ ವಿವಿಧ ಅಂಗಗಳಿಗೆ ತಲುಪಿ ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆಗಳಂತಹ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಜೊತೆಗೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬ್ಯಾಕ್ಟೀರಿಯಾ ವೇಗವಾಗಿ ವೃದ್ಧಿಯಾಗುವ ಸಾಧ್ಯತೆ ಹೆಚ್ಚಿರುವುದರಿಂದ, ದೀರ್ಘಕಾಲ ಬಳಸುವುದು ಅಪಾಯಕರ.
ತಾಮ್ರದ ಬಾಟಲಿಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಲಾಭಕರ ಎನ್ನಲಾಗುತ್ತದೆ. ತಾಮ್ರವು ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಗುಣ ಹೊಂದಿದ್ದು, ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಆಯುರ್ವೇದದಲ್ಲೂ ತಾಮ್ರದ ನೀರಿಗೆ ವಿಶೇಷ ಮಹತ್ವವಿದೆ. ಆದರೆ ನೀರನ್ನು ಬಹಳ ಕಾಲ ತಾಮ್ರದ ಬಾಟಲಿಯಲ್ಲಿ ಸಂಗ್ರಹಿಸಿದರೆ, ಅದು ವಿಷಕಾರಿಯಾಗುವ ಸಾಧ್ಯತೆ ಇದೆ. ಇದರಿಂದ ಯಕೃತ್ತಿಗೆ ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುವ ಅಪಾಯವಿರುತ್ತದೆ.
ಗಾಜಿನ ಬಾಟಲಿಗಳು ರಾಸಾಯನಿಕ ಸೋರಿಕೆಯಿಲ್ಲದ ಕಾರಣ ನೀರಿನ ಸಹಜ ರುಚಿಯನ್ನು ಕಾಪಾಡುತ್ತವೆ. ಬ್ಯಾಕ್ಟೀರಿಯಾ ಸಮಸ್ಯೆ ಕಡಿಮೆ ಮತ್ತು ಸ್ವಚ್ಛಗೊಳಿಸುವುದೂ ಸುಲಭ. ಬಿಪಿಎ ಮುಕ್ತವಾಗಿರುವುದರಿಂದ ಆರೋಗ್ಯಕ್ಕೂ, ಪರಿಸರಕ್ಕೂ ಉತ್ತಮ ಆಯ್ಕೆ ಎಂದು ಹೇಳಬಹುದು. ಆದರೆ ಜಾರಿ ಬಿದ್ದರೆ ಸುಲಭವಾಗಿ ಒಡೆಯುವ ಸಾಧ್ಯತೆ ಇರುವುದೇ ಇದರ ಮುಖ್ಯ ದೋಷ.
ಒಟ್ಟಿನಲ್ಲಿ, ನೀರು ಎಷ್ಟು ಮುಖ್ಯವೋ ಅದನ್ನು ಯಾವ ಬಾಟಲಿಯಲ್ಲಿ ಕುಡಿಯುತ್ತೇವೆ ಎಂಬುದೂ ಅಷ್ಟೇ ಮುಖ್ಯ. ಸರಿಯಾದ ಆಯ್ಕೆ ಮಾಡಿದರೆ ಆರೋಗ್ಯವನ್ನು ರಕ್ಷಿಸಬಹುದು, ತಪ್ಪಾದ ಆಯ್ಕೆ ಮಾಡಿದರೆ ಸಮಸ್ಯೆಗಳನ್ನು ಆಹ್ವಾನಿಸಿದಂತೆ.






