ಮರಣದಂಡನೆ ಪ್ರಕ್ರಿಯೆ ಸಾಮಾನ್ಯವಾಗಿ ಬೆಳಗಿನ ಜಾವ ಸುಮಾರು 2 ಗಂಟೆಗೆ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್, ವೈದ್ಯಾಧಿಕಾರಿ, ಜೈಲು ಸೂಪರಿಂಟೆಂಡೆಂಟ್ ಸೇರಿದಂತೆ ಸಂಬಂಧಿತ ಸಿಬ್ಬಂದಿ ಹಾಜರಿರುತ್ತಾರೆ. ಹಿಂದಿನ ರಾತ್ರಿ ಕೈದಿಗೆ ಸರಳ ಆಹಾರವನ್ನು ನೀಡಲಾಗುತ್ತದೆ.
ಇದನ್ನು ಓದಿ: ಪ್ರೀತಿಸಿ ಮದುವೆಯಾದ ಜೋಡಿಗೆ ಮನೆಯವರ ಬೆದರಿಕೆ: ಬೀದರ್ ಎಸ್ಪಿ ಕಚೇರಿಗೆ ಧಾವಿಸಿದ ನವ ವಿವಾಹಿತರು
ಕೈದಿ ಕೇಳಿದರೆ ಮಾತ್ರ ಮುಂಜಾನೆ ಸ್ವಲ್ಪ ಆಹಾರವನ್ನು ಒದಗಿಸಲಾಗುತ್ತದೆ. ನಂತರ ವೈದ್ಯರು ಕೊನೆಯ ಬಾರಿ ಕೈದಿಯ ಆರೋಗ್ಯವನ್ನು ಪರಿಶೀಲಿಸುತ್ತಾರೆ. ಗಲ್ಲು ಶಿಕ್ಷೆ ನಡೆಯುವ ಸ್ಥಳಕ್ಕೆ ಕೈದಿಯನ್ನು ಕರೆದುಕೊಂಡು ಬಂದ ಬಳಿಕ, ಅವರ ಮುಖ ಕಾಣದಂತೆ ಕಪ್ಪು ಬಟ್ಟೆಯಿಂದ ಮುಚ್ಚಲಾಗುತ್ತದೆ. ಕೈಗಳನ್ನು ಬೆನ್ನಿನ ಹಿಂದೆ ಕಟ್ಟಲಾಗುತ್ತದೆ. ಕೈದಿಯ ತೂಕಕ್ಕೆ ಅನುಗುಣವಾಗಿ ಹಗ್ಗ ಮತ್ತು ಕುಣಿಕೆಯ ವ್ಯವಸ್ಥೆಯನ್ನು ಮೊದಲೇ ಪರೀಕ್ಷಿಸಲಾಗಿರುತ್ತದೆ, ಹಗ್ಗಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ.
ಮ್ಯಾಜಿಸ್ಟ್ರೇಟ್ ಅಥವಾ ಜೈಲು ಸೂಪರಿಂಟೆಂಡೆಂಟ್ ಸೂಚನೆ ನೀಡುತ್ತಿದ್ದಂತೆ ಲಿವರ್ ಅನ್ನು ಎಳೆಯಲಾಗುತ್ತದೆ. ಐದು ನಿಮಿಷಗಳ ನಂತರ ವೈದ್ಯಕೀಯ ಅಧಿಕಾರಿ ಮುಂದೆ ಹೋಗಿ ನಾಡಿಯ ಸ್ಪಂದನವನ್ನು ಪರಿಶೀಲಿಸಿ ಸಾವನ್ನು ದೃಢಪಡಿಸುತ್ತಾರೆ. ಈ ಸಂಪೂರ್ಣ ಪ್ರಕ್ರಿಯೆ ಸಾಮಾನ್ಯವಾಗಿ ಬೆಳಗಿನ ಜಾವ 3:30 ರಿಂದ 4:00ರೊಳಗೆ ಮುಕ್ತಾಯಗೊಳ್ಳುತ್ತದೆ.
ಕೈದಿಯ ಶವವನ್ನು ಬಹುತೇಕ ಸಂದರ್ಭಗಳಲ್ಲಿ ಕುಟುಂಬದವರು ಪಡೆದುಕೊಳ್ಳುವುದಿಲ್ಲ; ಜೈಲು ಆವರಣದಲ್ಲಿರುವ ಸಮಾಧಿ ಸ್ಥಳದಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ.
ಮುಂಜಾನೆ ಸಮಯದಲ್ಲೇ ಜಾರಿಗೊಳಿಸುವ ಪ್ರಮುಖ ಕಾರಣವೆಂದರೆ, ಜೈಲಿನ ಇತರ ಕೈದಿಗಳಿಗೆ ಈ ವಿಷಯ ತಿಳಿದು ಮಾನಸಿಕ ಆಘಾತ ಉಂಟಾಗದಂತೆ ತಡೆಯುವುದು. ಜೊತೆಗೆ, ಮರಣದಂಡನೆ ಶಿಕ್ಷೆಯನ್ನು ಅತ್ಯಂತ ವಿರಳವಾಗಿ, ಕೇವಲ “ಅಪರೂಪದ” ಪ್ರಕರಣಗಳಲ್ಲಿ ಮಾತ್ರ ವಿಧಿಸಲಾಗುತ್ತದೆ. ಕಾನೂನು ವ್ಯವಸ್ಥೆಯಲ್ಲಿನ ಎಲ್ಲಾ ಮೇಲ್ಮನವಿ ಪ್ರಕ್ರಿಯೆಗಳು ಸಂಪೂರ್ಣವಾಗಿ ಮುಗಿದ ನಂತರವೇ ಈ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ.






