ಪ್ರಪಂಚದ ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ಕರೆನ್ಸಿ ಮೌಲ್ಯವನ್ನು ಹೊಂದಿದೆ. ಅಮೆರಿಕದ ಡಾಲರ್ ಮತ್ತು ಬ್ರಿಟಿಷ್ ಪೌಂಡ್ಗಳಂತಹ ಕರೆನ್ಸಿಗಳು ಭಾರತೀಯ ರೂಪಾಯಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದ್ದರೆ, ಪಾಕಿಸ್ತಾನ ಹಾಗೂ ಶ್ರೀಲಂಕಾ ಹೋಲುವ ದೇಶಗಳ ಕರೆನ್ಸಿಗಳು ರೂಪಾಯಿಗಿಂತ ದುರ್ಬಲವಾಗಿವೆ.
ಆದರೆ ಇವೆಲ್ಲವನ್ನೂ ಮೀರಿಸುವಂತೆ, ಭಾರತದ ರೂಪಾಯಿಗೆ ನೂರಾರು ಪಟ್ಟು ಮೌಲ್ಯ ನೀಡುವ ರಾಷ್ಟ್ರವೆಂದರೆ ಇರಾನ್. ಇರಾನ್ನ ಅಧಿಕೃತ ಕರೆನ್ಸಿಯಾದ ಇರಾನಿಯನ್ ರಿಯಾಲ್ ಇಂದು ಜಗತ್ತಿನ ಅತ್ಯಂತ ದುರ್ಬಲ ಕರೆನ್ಸಿಗಳ ಪೈಕಿ ಒಂದಾಗಿ ಪರಿಗಣಿಸಲಾಗಿದೆ.
ಇದನ್ನು ಓದಿ : ಮಧ್ಯಪ್ರದೇಶ: ಯುವಕನ ಖಾಸಗಿ ಅಂಗದಲ್ಲಿ ‘ಸೋರೆಕಾಯಿ’, ಎಕ್ಸ್ರೇ ನೋಡಿ ವೈದ್ಯರೇ ಶಾಕ್!
ಇತ್ತೀಚಿನ ಲೆಕ್ಕಾಚಾರಗಳ ಪ್ರಕಾರ, ಭಾರತದ ಒಂದು ರೂಪಾಯಿ ಇರಾನ್ನಲ್ಲಿ ಸುಮಾರು 460ಕ್ಕಿಂತ ಹೆಚ್ಚು ರಿಯಾಲ್ಗಳಿಗೆ ಸಮನಾಗುತ್ತದೆ. ಅಂದರೆ, ಭಾರತದಲ್ಲಿ ಅಲ್ಪವೆನಿಸುವ ಮೊತ್ತವೇ ಇರಾನ್ನಲ್ಲಿ ದೊಡ್ಡ ಹಣದ ಮೊತ್ತವಾಗಿ ಪರಿಣಮಿಸುತ್ತದೆ. ಉದಾಹರಣೆಗೆ, ಕೇವಲ 200ಕ್ಕೂ ಸ್ವಲ್ಪ ಹೆಚ್ಚು ಭಾರತೀಯ ರೂಪಾಯಿಗಳನ್ನು ಇರಾನ್ ಕರೆನ್ಸಿಗೆ ಬದಲಾಯಿಸಿದರೆ, ಅಲ್ಲಿನ ಲೆಕ್ಕದಲ್ಲಿ ನೀವು ಲಕ್ಷಾಂತರ ರಿಯಾಲ್ ಹೊಂದಿರುವ ವ್ಯಕ್ತಿಯಾಗುತ್ತೀರಿ. ಇದರಿಂದ ಎರಡು ದೇಶಗಳ ಆರ್ಥಿಕ ಸ್ಥಿತಿಗತಿಯ ನಡುವಿನ ಭಾರಿ ವ್ಯತ್ಯಾಸ ಸ್ಪಷ್ಟವಾಗುತ್ತದೆ.
ಇರಾನ್ ಈ ಮಟ್ಟದ ಆರ್ಥಿಕ ಸಂಕಷ್ಟಕ್ಕೆ ತಲುಪಲು ಪ್ರಮುಖ ಕಾರಣವೆಂದರೆ ಅಮೆರಿಕ ಹಾಗೂ ಪಾಶ್ಚಾತ್ಯ ರಾಷ್ಟ್ರಗಳು ಹೇರಿರುವ ಕಠಿಣ ಅಂತರಾಷ್ಟ್ರೀಯ ನಿರ್ಬಂಧಗಳು. 2018ರಿಂದ ಇರಾನ್ ಮೇಲೆ ವಿಧಿಸಲಾದ ಆರ್ಥಿಕ ನಿರ್ಬಂಧಗಳು ದೇಶದ ತೈಲ ರಫ್ತು ಹಾಗೂ ವಿದೇಶಿ ವ್ಯಾಪಾರವನ್ನು ಗಂಭೀರವಾಗಿ ಹೊಡೆದುಹಾಕಿವೆ.
ಇದರ ಪರಿಣಾಮವಾಗಿ ಕಳೆದ ಕೆಲವು ವರ್ಷಗಳಲ್ಲಿ ಇರಾನಿಯನ್ ರಿಯಾಲ್ ಮೌಲ್ಯವು ಶೇಕಡಾ 90ಕ್ಕಿಂತ ಹೆಚ್ಚು ಕುಸಿತ ಕಂಡಿದ್ದು, ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಕರೆನ್ಸಿ ಮೌಲ್ಯ ಕುಸಿತದ ಜೊತೆಗೆ, ಇರಾನ್ನಲ್ಲಿ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಸಾಮಾನ್ಯ ಜನರು ಜೀವನ ಸಾಗಿಸಲು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ.
ರಾಜಕೀಯ ಅಸ್ಥಿರತೆ, ಸರ್ಕಾರ ವಿರೋಧಿ ಪ್ರತಿಭಟನೆಗಳು ಹಾಗೂ ಅಂತರಾಷ್ಟ್ರೀಯ ಒತ್ತಡಗಳು ಕೂಡ ರಿಯಾಲ್ ಮೌಲ್ಯ ಮತ್ತಷ್ಟು ಕುಸಿಯಲು ಕಾರಣವಾಗಿವೆ. ಇಂದಿನ ಪರಿಸ್ಥಿತಿಯಲ್ಲಿ ಒಂದು ಯುಎಸ್ ಡಾಲರ್ ಖರೀದಿಸಲು ಅಲ್ಲಿ ಅಪಾರ ಪ್ರಮಾಣದ ರಿಯಾಲ್ ಖರ್ಚು ಮಾಡಬೇಕಾಗಿದೆ.
ಭಾರತದ ರೂಪಾಯಿ ಇರಾನ್ ಕರೆನ್ಸಿಗಿಂತ ಬಲಿಷ್ಠವಾಗಿರುವುದು ಹೆಮ್ಮೆಯ ಸಂಗತಿಯೇ ಆದರೂ, ಒಂದು ಕಾಲದಲ್ಲಿ ಶ್ರೀಮಂತ ಇತಿಹಾಸ ಮತ್ತು ಬಲಿಷ್ಠ ಆರ್ಥಿಕತೆಯನ್ನು ಹೊಂದಿದ್ದ ಇರಾನ್ ಇಂದು ಇಂತಹ ಗಂಭೀರ ಬಿಕ್ಕಟ್ಟಿನಲ್ಲಿ ಸಿಲುಕಿರುವುದು ನೋವಿನ ಸಂಗತಿ. ಜಾಗತಿಕ ರಾಜಕೀಯ ನಿರ್ಧಾರಗಳು ಮತ್ತು ಅಂತರಾಷ್ಟ್ರೀಯ ನಿರ್ಬಂಧಗಳು ಒಂದು ದೇಶದ ಕರೆನ್ಸಿ ಹಾಗೂ ಜನಜೀವನದ ಮೇಲೆ ಎಷ್ಟು ದೊಡ್ಡ ಪರಿಣಾಮ ಬೀರುತ್ತವೆ ಎಂಬುದಕ್ಕೆ ಇರಾನ್ ಸ್ಪಷ್ಟ ಉದಾಹರಣೆಯಾಗಿದೆ.






