ತಾಯಿಯ ಅಕ್ರಮ ಸಂಬಂಧದ ಸತ್ಯವನ್ನು ತಿಳಿದಿದ್ದ ಐದು ವರ್ಷದ ಮಗುವನ್ನೇ ಆಕೆ ನಿರ್ದಾಕ್ಷಿಣ್ಯವಾಗಿ ಕೊಂದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನ ಥಟೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ತಾಯಿ ತಪ್ಪಿತಸ್ಥೆ ಎಂದು ನ್ಯಾಯಾಲಯ ಸಾಬೀತುಪಡಿಸಿದ್ದು, ಸಾಕ್ಷ್ಯಗಳ ಕೊರತೆಯಿಂದ ಆಕೆಯ ಪ್ರೇಮಿ ಉದಯ್ ಇಂಡೋಲಿಯಾವನ್ನು ಪ್ರಕರಣದಿಂದ ಬಿಡುಗಡೆ ಮಾಡಲಾಗಿದೆ.
ಇದನ್ನು ಓದಿ: ಬೆಳಗಾವಿ: ಪತ್ನಿ ಕೊಂದು 2 ದಿನ ಶವದೊಂದಿಗೆ ಕಳೆದ ಪತಿ, ಹೆಣವನ್ನು ಬೆಡ್ ಕೆಳಗೆ ಅಡಗಿಸಿಟ್ಟು ಪರಾರಿ!!ಕೊಲೆಗೆ ಕಾರಣವೇನು?
ಪೊಲೀಸ್ ಕಾನ್ಸ್‌ಟೇಬಲ್ ಧ್ಯಾನ್ ಸಿಂಗ್ ರಾಥೋಡ್ ಅವರ ಪತ್ನಿ ಜ್ಯೋತಿ ರಾಥೋಡ್, ನೆರೆಯವನಾದ ಉದಯ್ ಇಂಡೋಲಿಯಾ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. 2023ರ ಏಪ್ರಿಲ್ 28ರಂದು ಜ್ಯೋತಿ ತನ್ನ ಪ್ರೇಮಿಯೊಂದಿಗೆ ಖಾಸಗಿ ಸಮಯ ಕಳೆಯುತ್ತಿದ್ದ ಸಂದರ್ಭವನ್ನು ಅವರ ಐದು ವರ್ಷದ ಮಗ ಜತಿನ್ ನೋಡಿದ್ದನು. ಈ ವಿಷಯ ಹೊರಬೀಳುವ ಭಯವೇ ಮುಂದಿನ ದಾರುಣ ಘಟನೆಗೆ ಕಾರಣವಾಯಿತು.
ಮಗ ಈ ವಿಷಯವನ್ನು ತನ್ನ ತಂದೆಗೆ ಹೇಳಿಬಿಡಬಹುದು ಎಂಬ ಆತಂಕದಿಂದ ಜ್ಯೋತಿ ಅಮಾನವೀಯ ನಿರ್ಧಾರ ಕೈಗೊಂಡಿದ್ದಾಳೆ. ಆ ದಿನ ಮಗುವನ್ನು ಕಟ್ಟಡದ ಎರಡನೇ ಮಹಡಿಯಿಂದ ಕೆಳಕ್ಕೆ ತಳ್ಳಿದಳು. ರಸ್ತೆ ಮೇಲೆ ಬಿದ್ದು ಮಗು ನೋವಿನಿಂದ ಕಿರುಚುತ್ತಿದ್ದರೂ, ತಾಯಿ ಮಾತ್ರ ಸಹಾಯಕ್ಕೆ ಮುಂದಾಗಲಿಲ್ಲ.
ಗಂಭೀರ ಗಾಯಗೊಂಡ ಜತಿನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗಲೂ ಜ್ಯೋತಿ ಅಲ್ಲಿ ಕಾಣಿಸಿಕೊಂಡಿಲ್ಲ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಜತಿನ್ ಜಯಾರೋಗ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಗೆ ಮೃತಪಟ್ಟರು. ಆರಂಭದಲ್ಲಿ ಈ ಘಟನೆ ಆಕಸ್ಮಿಕ ಅಪಘಾತವೆಂದು ಕುಟುಂಬದವರು ಭಾವಿಸಿದ್ದರು.
ಘಟನೆ ನಡೆದ 15 ದಿನಗಳ ನಂತರ ಸತ್ಯ ಬಯಲಾಗಿತು. ಮಗುವಿನ ತಂದೆಯಾಗಿರುವ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಆಗಿರುವ ಧ್ಯಾನ್ ಸಿಂಗ್ ಅವರಿಗೆ ಪತ್ನಿಯ ವರ್ತನೆ ಸಂಶಯಾಸ್ಪದವಾಗಿ ಕಂಡಿತು. ಪಶ್ಚಾತ್ತಾಪದಿಂದ ಜ್ಯೋತಿ “ನಾನು ದೊಡ್ಡ ತಪ್ಪು ಮಾಡಿದ್ದೇನೆ” ಎಂದು ಪತಿಯ ಬಳಿ ಒಪ್ಪಿಕೊಂಡಾಗ, ಅವರು ಆಕೆಯನ್ನು ಸಮಾಧಾನಪಡಿಸಿ ಸಂಪೂರ್ಣ ಸತ್ಯವನ್ನು ಹೇಳುವಂತೆ ಮಾಡಿದರು.
ಪತ್ನಿಯ ಒಪ್ಪಿಗೆಯ ಮಾತುಗಳನ್ನು ಧ್ಯಾನ್ ಸಿಂಗ್ ರಹಸ್ಯವಾಗಿ ಆಡಿಯೋ ಮತ್ತು ವಿಡಿಯೋ ರೂಪದಲ್ಲಿ ದಾಖಲಿಸಿಕೊಂಡರು. ಜೊತೆಗೆ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದರು. ಬಳಿಕ ಪತ್ನಿಯ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಪೊಲೀಸರು ಜ್ಯೋತಿ ಹಾಗೂ ಆಕೆಯ ಪ್ರೇಮಿ ಉದಯ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದರು. ಸರ್ಕಾರಿ ಅಭಿಯೋಜಕ ವಿಜಯ್ ಶರ್ಮಾ ವಾದ ಮಂಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸತ್ರ ನ್ಯಾಯಾಲಯ, ಮಗುವಿನ ಕೊಲೆಗೆ ಜ್ಯೋತಿ ದೋಷಿ ಎಂದು ತೀರ್ಪು ನೀಡಿ ಆಕೆಗೆ ಜೀವಾವಧಿ ಶಿಕ್ಷೆ ವಿಧಿಸಿತು.
ಆದರೆ ಉದಯ್ ಇಂಡೋಲಿಯಾ ವಿರುದ್ಧ ನೇರ ಹಾಗೂ ಪೂರಕ ಸಾಕ್ಷ್ಯಗಳು ಇಲ್ಲದ ಕಾರಣ, ನ್ಯಾಯಾಲಯ ಆತನನ್ನು ಪ್ರಕರಣದಿಂದ ಖುಲಾಸೆಗೊಳಿಸಿತು. ಈ ಅಮಾನವೀಯ ಘಟನೆ ಮಧ್ಯಪ್ರದೇಶದ ಭೋಪಾಲ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.






