ಬಸ್‌ಗಳಲ್ಲಿ ಪ್ರಯಾಣಿಸುವ ವೇಳೆ ಕೆಲವರು ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಸ್ಪರ್ಶಿಸುವ ಘಟನೆಗಳು ನಡೆಯುತ್ತವೆ. ಆದರೆ ಕೆಲ ಸಂದರ್ಭಗಳಲ್ಲಿ ಅದು ಅಚಾನಕ್ ಆಗಿರಬಹುದೇ ಅಥವಾ ದುರುದ್ದೇಶದಿಂದ ಮಾಡಲಾದದ್ದೇ ಎಂಬುದನ್ನು ಗುರುತಿಸುವುದು ಮಹಿಳೆಯರಿಗೆ ಕಷ್ಟವಾಗುತ್ತದೆ. ಇಂತಹ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆದ ಒಂದು ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.
ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಶಿಮ್ಜಿತಾ ಮುಸ್ತಫಾ ಬಸ್‌ನಲ್ಲಿ ಪ್ರಯಾಣಿಸುವಾಗ, ತಮ್ಮ ಹಿಂದಿದ್ದ ಸಹಪ್ರಯಾಣಿಕ ದೀಪಕ್ ತಮ್ಮನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ಮಿಲಿಯನ್‌ಗಟ್ಟಲೆ ವೀಕ್ಷಣೆಗಳನ್ನು ಪಡೆದಿತ್ತು. ಬಳಿಕ ಅದನ್ನು ಡಿಲೀಟ್ ಮಾಡಲಾಗಿತ್ತು. ಆದರೆ ಅದಕ್ಕೂ ಮೊದಲು, ಆರೋಪಕ್ಕೊಳಗಾದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಶಿಮ್ಜಿತಾ ಮುಸ್ತಫಾ ಬಸ್‌ನಲ್ಲಿ ಸೆಲ್ಫಿ ಸ್ಟಿಕ್ ಹಿಡಿದು ವಿಡಿಯೋ ಮಾಡುತ್ತಾ ಪ್ರಯಾಣಿಸುತ್ತಿದ್ದರು. ಆ ವೇಳೆ ದೀಪಕ್ ಅವರ ಹಿಂದೆ ನಿಂತಿದ್ದರು. ಈ ಸಂದರ್ಭ ದೀಪಕ್ ತಮ್ಮನ್ನು ಟಚ್ ಮಾಡಿದ್ದಾರೆ ಎಂದು ಶಿಮ್ಜಿತಾ ಆರೋಪಿಸಿದ್ದರು. ಲೈಂಗಿಕ ದೌರ್ಜನ್ಯದ ಆರೋಪದೊಂದಿಗೆ ಆ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಮಹಿಳೆಯರ ಮೇಲಿನ ದೌರ್ಜನ್ಯ ಎಂಬ ವಿಷಯವಾಗಿರುವುದರಿಂದ, ಸತ್ಯಾಸತ್ಯತೆ ಪರಿಶೀಲನೆ ಮಾಡದೆ ಅನೇಕರು ತೀವ್ರ ಪ್ರತಿಕ್ರಿಯೆಗಳನ್ನು ನೀಡಿದ್ದರು. ಪರಿಣಾಮವಾಗಿ ವಿಡಿಯೋಗೆ ಅಪಾರ ವೀಕ್ಷಣೆಗಳು ಮತ್ತು ಕಮೆಂಟ್‌ಗಳು ಬಂದಿದ್ದವು.
ಮಾರನೆಯ ದಿನವೂ ಈ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ಪೋಸ್ಟ್ ಮಾಡಲಾಗಿದ್ದು, ಅದಕ್ಕೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಈ ಸಂಬಂಧ ಯಾವುದೇ ಪೊಲೀಸ್ ದೂರು ದಾಖಲಿಸಿರಲಿಲ್ಲ. ವಿಡಿಯೋದಲ್ಲಿ ದೀಪಕ್ ಅವರ ಮುಖ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದರಿಂದ, ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವಿಲ್ಲದ ಅವರ ಕುಟುಂಬಕ್ಕೂ ಈ ವಿಷಯ ತಿಳಿದುಬಂದಿತು. ಇದರಿಂದ ದೀಪಕ್ ಅವರ ಸಾಮಾಜಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ ಎನ್ನಲಾಗಿದೆ.
ಸಾರ್ವಜನಿಕ ಟೀಕೆ, ನಿಂದನೆ ಹಾಗೂ ಮಾನಸಿಕ ಒತ್ತಡವನ್ನು ತಡೆಯಲಾರದೆ 41 ವರ್ಷದ ಮಾರಾಟ ವ್ಯವಸ್ಥಾಪಕ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿನ ನಂತರ ವಿಡಿಯೋವನ್ನು ನೋಡಿದವರು, ಘಟನೆಯ ವೇಳೆ ಶಿಮ್ಜಿತಾ ನಗುನಗುತ್ತಾ ಮಾತನಾಡುತ್ತಿರುವುದು ಕಾಣುತ್ತದೆ ಎಂದು ಹೇಳುತ್ತಿದ್ದಾರೆ. ದೀಪಕ್ ಅವರ ಕೈ ಶಿಮ್ಜಿತಾರನ್ನು ಸ್ಪರ್ಶಿಸಿದ್ದೇನೋ ನಿಜವಾದರೂ, ಅದು ಉದ್ದೇಶಪೂರ್ವಕವೇ ಅಥವಾ ಅಚಾನಕ್ ಆಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎನ್ನಲಾಗುತ್ತಿದೆ. ಈ ಕಾರಣದಿಂದಲೇ, ಇದು ಲೈಕ್ ಮತ್ತು ವೀಕ್ಷಣೆಗಾಗಿ ಮಾಡಿದ ವಿಡಿಯೋ ಎಂಬ ಆರೋಪಗಳು ಕೇಳಿಬರುತ್ತಿವೆ. ಘಟನೆಯ ಸತ್ಯಾಸತ್ಯತೆ ಇನ್ನೂ ತನಿಖೆಯಿಂದ ಹೊರಬರಬೇಕಿದೆ.
ದೀಪಕ್ ಅವರು ಕುಟುಂಬದ ಏಕೈಕ ಪುತ್ರರಾಗಿದ್ದರು. ಮಗನನ್ನು ಕಳೆದುಕೊಂಡ ದುಃಖದಲ್ಲಿ ಅವರ ಕುಟುಂಬವಿದೆ. ಪೊಲೀಸ್ ದೂರು ನೀಡದೇ ನೇರವಾಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ನಂತರ ಅದನ್ನು ಡಿಲೀಟ್ ಮಾಡಿರುವುದರ ಹಿಂದೆ ಇರುವ ಕಾರಣಗಳ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ಶಿಮ್ಜಿತಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ದೀಪಕ್ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬ ಒತ್ತಾಯಗಳು ಹೆಚ್ಚಾಗಿವೆ. ಈ ಘಟನೆಯನ್ನು ಕೆಲವರು ಮಾನಸಿಕವಾಗಿ ಕೊಲೆಗೆ ಸಮಾನವೆಂದು ಆರೋಪಿಸುತ್ತಿದ್ದಾರೆ. ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯ ಮೇಲೆ ಎಲ್ಲರ ಗಮನ ನೆಟ್ಟಿದೆ.






