ಬೆಂಗಳೂರು (ಬಿಡದಿ): ಬಿಗ್ ಬಾಸ್ ಕನ್ನಡ ಸೀಸನ್–12ರ ಫಿನಾಲೆ ಹಿನ್ನಲೆಯಲ್ಲಿ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೋ ಎದುರು ಅಭಿಮಾನಿಗಳ ಭಾರೀ ಜಮಾವಣೆ ಕಂಡುಬಂದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಒಂದು ಕೆಎಸ್ಆರ್ಪಿ ತುಕಡಿ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಬಿಡದಿ ಠಾಣೆ ಪೊಲೀಸರು ಕೂಡ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಫಿನಾಲೆ ಫಲಿತಾಂಶದ ಅಧಿಕೃತ ಘೋಷಣೆಗೂ ಮುನ್ನವೇ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಸಂಭ್ರಮಾಚರಣೆ ಆರಂಭಿಸಿದ್ದಾರೆ. ವಿಶೇಷವಾಗಿ ಗಿಲ್ಲಿ ಅಭಿಮಾನಿಗಳ ಉತ್ಸಾಹ ಮಿತಿಮೀರಿದ್ದು, ಡೋಲು–ತಮಟೆ, ಜೈಕಾರ, ಘೋಷಣೆ ಹಾಗೂ ಕುಣಿತದಿಂದ ಜಾಲಿವುಡ್ ಸ್ಟುಡಿಯೋ ಸುತ್ತಮುತ್ತಲ ಪ್ರದೇಶ ಗದ್ದಲಮಯವಾಗಿದೆ.
ಬೈಕ್ ಸೈಲೆನ್ಸರ್ ಫೈರಿಂಗ್ನಿಂದ ಉದ್ವಿಗ್ನತೆ
ಬಿಗ್ ಬಾಸ್ ಮನೆ ಮುಂಭಾಗ ಕೆಲ ಅಭಿಮಾನಿಗಳು ಬೈಕ್ ಸೈಲೆನ್ಸರ್ಗಳಲ್ಲಿ ಫೈರಿಂಗ್ ನಡೆಸಿದ್ದು, ಗದ್ದಲ ಮತ್ತಷ್ಟು ತೀವ್ರಗೊಂಡಿದೆ. ರಸ್ತೆ ಮಧ್ಯೆ ನಿಂತು ಜೈಕಾರ ಕೂಗಿದ ಅಭಿಮಾನಿಗಳು ಪೊಲೀಸರ ಮನವಿಯನ್ನೂ ಲೆಕ್ಕಿಸದೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
ಸ್ಟುಡಿಯೋ ಗೇಟ್ಗೆ ನುಗ್ಗಲು ಯತ್ನ
ಜನಸಂದಣಿ ಹೆಚ್ಚಾದಂತೆ ಕೆಲ ಅಭಿಮಾನಿಗಳು ಸ್ಟುಡಿಯೋ ಗೇಟ್ ಒಳಗೆ ಪ್ರವೇಶಿಸಲು ಯತ್ನಿಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿಚಾರ್ಜ್ ನಡೆಸಿದರು. ಆದರೂ ಅಭಿಮಾನಿಗಳ ಸಂಭ್ರಮದಲ್ಲಿ ಯಾವುದೇ ಕಡಿಮೆಯಾಗದೇ, ರಸ್ತೆ ಮೇಲೆಯೇ ನಿಂತು ಘೋಷಣೆ ಮುಂದುವರಿಸಿದರು.
ಘೋಷಣೆಗೂ ಮುನ್ನವೇ ವಿಜಯೋತ್ಸವ
ಜಾಲಿವುಡ್ ಸ್ಟುಡಿಯೋ ಗೇಟ್ ಎದುರು ಗಿಲ್ಲಿಯ ಬಾವುಟ ಹಿಡಿದು ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದು, ಡೈಲಾಗ್ಗಳನ್ನು ಕೂಗಿ ಸಂಭ್ರಮಿಸಿದ್ದಾರೆ. ಬ್ಯಾನರ್ಗಳಿಗೆ ಹಾಲಿನ ಅಭಿಷೇಕ, ಕಟೌಟ್ಗಳಿಗೆ ಹೂವಿನ ಹಾರ ಹಾಕುವ ಮೂಲಕ ಘೋಷಣೆಗೂ ಮುನ್ನವೇ ವಿಜಯೋತ್ಸವದ ವಾತಾವರಣ ನಿರ್ಮಾಣವಾಗಿದೆ. ಜಾಲಿವುಡ್ ಸ್ಟುಡಿಯೋ ಸುತ್ತಮುತ್ತ ಫ್ಲೆಕ್ಸ್, ಬ್ಯಾನರ್ ಹಾಗೂ ಭಾರೀ ಕಟೌಟ್ಗಳಿಂದ ತುಂಬಿದೆ.
ಕಠಿಣ ಪೊಲೀಸ್ ಬಂದೋಬಸ್ತ್
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಬಿಗ್ ಬಾಸ್ ಸೀಸನ್–12 ಫಿನಾಲೆ ಹಿನ್ನಲೆಯಲ್ಲಿ ಜಾಲಿವುಡ್ ಸ್ಟುಡಿಯೋ ಮುಂದೆ ಅಭಿಮಾನಿಗಳ ಉತ್ಸಾಹ ಪರಾಕಾಷ್ಠೆಗೆ ತಲುಪಿದ್ದು, ಗಿಲ್ಲಿ ಗೆಲುವು ಘೋಷಣೆಯಾಗಿದರೆ ಸಂಭ್ರಮ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.






