ಇತ್ತೀಚೆಗೆ ಚೆನ್ನೈನ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಸುಮಾರು ₹45 ಲಕ್ಷ ಮೌಲ್ಯದ ಚಿನ್ನಾಭರಣಗಳಿರುವ ಬ್ಯಾಗ್ನ್ನು ಯಾವುದೇ ಸ್ವಾರ್ಥವಿಲ್ಲದೆ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆಯ ಮಾದರಿಯಾದ ಚೆನ್ನೈ ಮಹಾನಗರ ಪಾಲಿಕೆಯ ಪೌರಕಾರ್ಮಿಕ ಪದ್ಮಾ ಅವರನ್ನು ದಕ್ಷಿಣ ಭಾರತದ ಖ್ಯಾತ ಲಲಿತಾ ಜ್ಯುವೆಲರ್ಸ್ ಸಂಸ್ಥೆಯ ಮಾಲೀಕ ಎಂ. ಕಿರಣ್ ಕುಮಾರ್ ಅವರು ತಮ್ಮ ನಿವಾಸಕ್ಕೆ ಆಹ್ವಾನಿಸಿ ಗೌರವಿಸಿದರು.
ಇದನ್ನು ಓದಿ: ಮಂಡ್ಯ: ಆಸ್ತಿ ವಿಚಾರಕ್ಕಾಗಿ ಅಣ್ಣ ಮತ್ತು ಅಣ್ಣನ ಮಕ್ಕಳಿಂದ ಸ್ವಂತ ತಮ್ಮನ ಹತ್ಯೆ
ಪದ್ಮಾ ಅವರ ಈ ಸತ್ಕಾರ್ಯವನ್ನು ಮೆಚ್ಚಿಕೊಂಡ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಈಗಾಗಲೇ ಪದ್ಮಾ ಹಾಗೂ ಅವರ ಕುಟುಂಬವನ್ನು ತಮ್ಮ ಕಚೇರಿಗೆ ಕರೆಸಿ ಸನ್ಮಾನಿಸಿದ್ದರು. ಇದೀಗ ಲಲಿತಾ ಜ್ಯುವೆಲರ್ಸ್ ಮಾಲೀಕ ಕಿರಣ್ ಕುಮಾರ್ ಅವರು ಪದ್ಮಾ ಅವರನ್ನು ತಮ್ಮ ಮನೆಗೆ ಕರೆಸಿ ಆತ್ಮೀಯವಾಗಿ ಸತ್ಕರಿಸಿ, ಭೋಜನ ವ್ಯವಸ್ಥೆ ಮಾಡಿ, ಬಹುಮಾನ ನೀಡಿ ಶುಭಾಶಯಗಳೊಂದಿಗೆ ಕಳುಹಿಸಿದ್ದಾರೆ.
ಈ ಘಟನೆ ಜನವರಿ 14ರಂದು ಚೆನ್ನೈನ ಟಿ. ನಗರ್ನ ಮುಪ್ಪತ್ತಮನ್ ಟೆಂಪಲ್ ಸ್ಟ್ರೀಟ್ನಲ್ಲಿ ನಡೆದಿತ್ತು. ಎಂದಿನಂತೆ ಮುಂಜಾನೆ ರಸ್ತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪದ್ಮಾ ಅವರಿಗೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಒಂದು ಬ್ಯಾಗ್ ಕಾಣಿಸಿಕೊಂಡಿತ್ತು. ಅನುಮಾನ ಹುಟ್ಟಿದ ಕಾರಣ ಆ ಬ್ಯಾಗ್ ತೆರೆಯುತ್ತಿದ್ದಂತೆಯೇ ಅದರೊಳಗೆ ಮಿಂಚುತ್ತಿದ್ದ ಅಪ್ಪಟ ಬಂಗಾರದ ಆಭರಣಗಳು ಕಾಣಿಸಿಕೊಂಡು ಅವರು ಅಚ್ಚರಿ ಗೊಂಡರು.
ಕ್ಷಣಮಾತ್ರವೂ ತಡಮಾಡದೆ ಪದ್ಮಾ ಅವರು ಆ ಬ್ಯಾಗ್ನ್ನು ಸಮೀಪದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಒಪ್ಪಿಸಿದ್ದರು. ಪೊಲೀಸರು ತನಿಖೆ ನಡೆಸಿ ಬ್ಯಾಗಿನ ನೈಜ ಮಾಲೀಕರನ್ನು ಪತ್ತೆಹಚ್ಚಿ, ಚಿನ್ನಾಭರಣಗಳನ್ನು ಸುರಕ್ಷಿತವಾಗಿ ಅವರಿಗೆ ಹಿಂದಿರುಗಿಸಿದರು.
ಈ ಚಿನ್ನಾಭರಣಗಳ ಬ್ಯಾಗಿನ ಮಾಲೀಕರು ಚೆನ್ನೈನ ನಂಗನಲ್ಲೂರು ಪ್ರದೇಶದ ನಿವಾಸಿ ರಮೇಶ್ ಎಂಬವರು ಎಂದು ತಿಳಿದುಬಂದಿದೆ. ಅವರು ತಮ್ಮ ಲಗೇಜುಗಳೊಂದಿಗೆ ಈ ಚಿನ್ನಾಭರಣಗಳ ಬ್ಯಾಗ್ನ್ನು ತೆಗೆದುಕೊಂಡು ಪ್ರಯಾಣಿಸುತ್ತಿದ್ದ ವೇಳೆ, ಟಿ. ನಗರ್ ರಸ್ತೆಯಲ್ಲಿ ಅದು ಅಜಾಗರೂಕತೆಯಿಂದ ಕೆಳಗೆ ಬಿದ್ದಿತ್ತು. ಮನೆಗೆ ತಲುಪಿದ ಬಳಿಕವೇ ಬ್ಯಾಗ್ ಕಳೆದುಹೋದ ವಿಷಯ ಅವರ ಗಮನಕ್ಕೆ ಬಂದಿದ್ದು, ಇದರಿಂದ ಆತಂಕಗೊಂಡ ರಮೇಶ್ ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ಇದೇ ಸಮಯದಲ್ಲಿ ಪದ್ಮಾ ಅವರು ಚಿನ್ನದ ಬ್ಯಾಗ್ ಸಿಕ್ಕಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಒಪ್ಪಿಸಿದ್ದರಿಂದ, ಪೊಲೀಸರ ಪರಸ್ಪರ ಮಾಹಿತಿ ವಿನಿಮಯದ ಮೂಲಕ ಬ್ಯಾಗಿನ ನೈಜ ಮಾಲೀಕರು ಪತ್ತೆಯಾಗಿದ್ದು, ಆಭರಣಗಳ ಬ್ಯಾಗ್ ಅವರನ್ನು ಮರಳಿ ತಲುಪಿಸಲಾಯಿತು.






