ಆರ್. ರೆಹಮಾನ್ ಅವರು ವಿಶ್ವ ಖ್ಯಾತ ಸಂಗೀತ ಸಂಯೋಜಕರಾಗಿದ್ದು, ಆಸ್ಕರ್ ಪ್ರಶಸ್ತಿ ಪಡೆದಿರುವವರು. ಅವರ ಸಾಧನೆ ಹಾಗೂ ಗೌರವ ಅಪಾರ. ಆದರೆ ಇತ್ತೀಚೆಗೆ ಅವರು ನೀಡಿದ ಹೇಳಿಕೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಹಿಂದಿ ಚಿತ್ರರಂಗದಲ್ಲಿ ಧರ್ಮದ ಕಾರಣದಿಂದಲೇ ತಮಗೆ ಅವಕಾಶಗಳು ಕಡಿಮೆಯಾಗಿವೆ ಎಂಬುದಾಗಿ ಅವರು ಹೇಳಿದ್ದು, ಇದಕ್ಕೆ ಬೆಂಬಲವೂ ಟೀಕೆಯೂ ವ್ಯಕ್ತವಾಗಿದೆ. ಕೆಲವರು ಅವರ ಅಭಿಪ್ರಾಯವನ್ನು ಒಪ್ಪಿಕೊಂಡರೆ, ಇನ್ನೂ ಕೆಲವರು ಆ ಆರೋಪಕ್ಕೆ ಅಸಮ್ಮತಿ ಸೂಚಿಸಿದ್ದಾರೆ.
ಇದನ್ನು ಓದಿ: ಟಾಕ್ಸಿಕ್’ ಭಯ? ಸಂಪ್ರದಾಯ ಮುರಿದ ನಟ ಸಲ್ಮಾನ್ ಖಾನ್; ಇದು ಯಶ್ ಪವರ್!
ಬಿಬಿಸಿ ಏಷ್ಯನ್ ನೆಟ್ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೆಹಮಾನ್, ಕಳೆದ ಎಂಟು ವರ್ಷಗಳಿಂದ ಬಾಲಿವುಡ್‌ನಲ್ಲಿ ತಮಗೆ ಹೊಸ ಆಫರ್‌ಗಳು ಬಂದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣಗಳು ಏನೆಂಬುದು ನೇರವಾಗಿ ಅಲ್ಲ, ಆದರೆ ಒಳಗಿನ ಮಾರ್ಗಗಳಿಂದ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ. ತಾವು ಕೆಲಸಕ್ಕಾಗಿ ಹುಡುಕಾಟ ನಡೆಸುವುದಿಲ್ಲ, ಕೆಲಸವೇ ತಮ್ಮ ಬಳಿ ಬರಬೇಕು ಎಂಬ ನಿಲುವು ತಮ್ಮದು ಎಂದು ಸ್ಪಷ್ಟಪಡಿಸಿದ್ದಾರೆ.
ಜ್ಞಾನವು ಯಾರಿಂದ ಬಂದರೂ ಅದಕ್ಕೆ ಬೆಲೆ ಕಟ್ಟಲಾಗದು ಎಂಬ ಪ್ರವಾದಿಯ ಮಾತನ್ನು ಉಲ್ಲೇಖಿಸಿದ ರೆಹಮಾನ್, ಒಳ್ಳೆಯದಾಗಲಿ ಕೆಟ್ಟದಾಗಲಿ ಅನುಭವದಿಂದ ಸಿಗುವ ಪಾಠ ಅಮೂಲ್ಯವೆಂದು ಹೇಳಿದ್ದಾರೆ. ಸಣ್ಣ ಮನಸ್ಸು ಹಾಗೂ ಸ್ವಾರ್ಥವನ್ನು ಮೀರಿ ಯೋಚಿಸಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಾಲಿವುಡ್‌ನಲ್ಲಿ ಸೃಜನಶೀಲತೆಯಿಲ್ಲದವರೇ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧರ್ಮದ ಹಿನ್ನೆಲೆಯ ಕಾರಣಕ್ಕೂ ತಮಗೆ ಅವಕಾಶಗಳು ಕೈ ತಪ್ಪುತ್ತಿರಬಹುದು ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ಸಿನಿಮಾಗೆ ತಮ್ಮನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಬರುತ್ತದೆ, ಆದರೆ ನಂತರ ಮ್ಯೂಸಿಕ್ ಕಂಪನಿಗಳು ತಮ್ಮದೇ ಕೆಲವೇ ಸಂಗೀತ ನಿರ್ದೇಶಕರನ್ನು ಮುಂದಿಟ್ಟು ಕೊಳ್ಳುತ್ತವೆ ಎಂದು ಹೇಳಿದ್ದಾರೆ. ಅಂತಹ ಸಂದರ್ಭಗಳಲ್ಲಿ ತಾವು ಮನೆಯಲ್ಲಿ ನೆಮ್ಮದಿಯಾಗಿ ವಿಶ್ರಾಂತಿ ಪಡೆಯುತ್ತೇನೆ ಎಂದೂ ಅವರು ಹೇಳಿದ್ದಾರೆ.
ತಾವು ಮುಸ್ಲಿಂ ಸಮುದಾಯಕ್ಕೆ ಸೇರಿದವರಾದರೂ, ಬ್ರಾಹ್ಮಣ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, ಅಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಕಲಿತೆ ಎಂದು ರೆಹಮಾನ್ ಹೇಳಿದ್ದಾರೆ. ಇದರ ನಡುವೆಯೇ, ಈಗ ಹಿಂದಿ ‘ರಾಮಾಯಣ’ ಚಿತ್ರಕ್ಕೆ ತಮ್ಮದೇ ಸಂಗೀತ ಸಂಯೋಜನೆ ಇರುವುದನ್ನೂ ಅವರು ನೆನಪಿಸಿದ್ದಾರೆ.






