ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಣ್ಣನೊಬ್ಬ ತನ್ನ ತಮ್ಮನನ್ನು ಇರಿದು ಕೊಂದಿರುವ ದುರ್ಘಟನೆ ನಡೆದಿದೆ. ಕೊಲೆಯಾದವರು ಯೋಗೇಶ್ (30). ಈ ಕೃತ್ಯವನ್ನು ಅಣ್ಣ ಲಿಂಗರಾಜು ಹಾಗೂ ಆತನ ಮಕ್ಕಳಾದ ಭರತ್ ಮತ್ತು ದರ್ಶನ್ ಎಸಗಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ಚಿಕ್ಕಬಳ್ಳಾಪುರ: ಅಣ್ಣ–ತಂಗಿಯ ಪವಿತ್ರ ಸಂಬಂಧಕ್ಕೆ ಧಕ್ಕೆ: ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ 21 ವರ್ಷದ ಯುವತಿ ನೇಣಿಗೆ ಶರಣು
ಯೋಗೇಶ್‌ಗೆ ಇದೇ ತಿಂಗಳು 21ರಂದು ಮದುವೆ ನಿಶ್ಚಯವಾಗಿದ್ದು, ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿಕೊಂಡಿತ್ತು. ಸಂಬಂಧಿಕರಿಗೆ ಲಗ್ನಪತ್ರಿಕೆ ವಿತರಿಸಿ ಮದುವೆ ಸಿದ್ಧತೆಯಲ್ಲಿ ತೊಡಗಿದ್ದ ಯೋಗೇಶ್, ಆಸ್ತಿ ವಿಚಾರದಲ್ಲಿ ವಿವಾದ ಇದ್ದರೂ ಅಣ್ಣನ ಮೇಲಿನ ಗೌರವದಿಂದ ಲಗ್ನಪತ್ರಿಕೆಯಲ್ಲಿ ಲಿಂಗರಾಜು ಅವರ ಹೆಸರನ್ನೂ ಉಲ್ಲೇಖಿಸಿದ್ದರು. ಆದರೆ ಮದುವೆಗೆ ಕೇವಲ ಐದು ದಿನ ಬಾಕಿ ಇರುವಾಗಲೇ ಅಣ್ಣ ತಮ್ಮನ ಜೀವ ತೆಗೆದಿದ್ದಾನೆ.
ಇದನ್ನು ಓದಿ: ಶಿವಮೊಗ್ಗ: ಅಣ್ಣನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಆರೋಪ.. ತೋಟದಲ್ಲಿ ತಮ್ಮನ ಹತ್ಯೆ
ಈ ಹತ್ಯೆಗೆ 19 ಎಕರೆ ಜಮೀನಿನ ಆಸ್ತಿ ವಿವಾದವೇ ಪ್ರಮುಖ ಕಾರಣ ಎನ್ನಲಾಗಿದೆ. ತಂದೆಯ ನಿಧನದ ಬಳಿಕ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಲಿಂಗರಾಜು, 12 ಎಕರೆ ಪಿತ್ರಾರ್ಜಿತ ಆಸ್ತಿ ಹಾಗೂ ತಾಯಿಯ ಹೆಸರಿನಲ್ಲಿದ್ದ 6 ಎಕರೆ ಜಮೀನನ್ನು ಸಹೋದರರು ಮತ್ತು ಸಹೋದರಿಗೆ ಪಾಲು ನೀಡದೆ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಮೈಸೂರು ಮತ್ತು ಮಂಡ್ಯದಲ್ಲಿದ್ದ ನಾಲ್ಕು ನಿವೇಶನಗಳನ್ನೂ ತನ್ನ ಹೆಸರಿಗೆ ವರ್ಗಾಯಿಸಿಕೊಂಡು, ನಂತರ ಅವುಗಳನ್ನು ಪತ್ನಿಯ ಹೆಸರಿಗೆ ಖಾತೆ ಮಾಡಿಸಿದ್ದಾನೆ ಎನ್ನಲಾಗಿದೆ.
ಅಣ್ಣನ ಈ ಕ್ರಮವನ್ನು ಪ್ರಶ್ನಿಸಿ ಯೋಗೇಶ್ ತನ್ನ ಪಾಲಿನ ಆಸ್ತಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರಿಂದ ಕೋಪಗೊಂಡ ಲಿಂಗರಾಜು ಮತ್ತು ಆತನ ಮಕ್ಕಳು, ಆಸ್ತಿ ಪಾಲು ಕೈ ತಪ್ಪಬಾರದೆಂದು ಮದುವೆಯ ಸಂಭ್ರಮದಲ್ಲಿದ್ದ ಯೋಗೇಶ್‌ನನ್ನು 28 ಬಾರಿ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮಾಯಪ್ಪನಹಳ್ಳಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ರೊಚ್ಚಿಗೆದ್ದ ಗ್ರಾಮಸ್ಥರು ಆರೋಪಿ ಲಿಂಗರಾಜುವಿನ ಮನೆಗೆ ನುಗ್ಗಿ ಗೃಹೋಪಯೋಗಿ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ನಡೆಸಿ ತಲೆಮರೆಸಿಕೊಂಡಿರುವ ಲಿಂಗರಾಜು, ಭರತ್ ಮತ್ತು ದರ್ಶನ್‌ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.






