ಸಂಕ್ರಾಂತಿ ಹಬ್ಬದ ಸಂಭ್ರಮಕ್ಕಾಗಿ ಹಾಸ್ಟೆಲ್ನಲ್ಲಿದ್ದ ಮಗಳನ್ನು ಮನೆಗೆ ಕರೆತರುವ ಉದ್ದೇಶದಿಂದ ಹೊರಟಿದ್ದ ತಂದೆಯೊಬ್ಬರು, ಗಾಳಿಪಟದ ಮಾಂಜಾ ದಾರಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ತಾಳಮಡಗಿ ಗ್ರಾಮದ ಬಳಿ ನಡೆದಿದೆ.
ಇದನ್ನು ಓದಿ: ತಾಯಿ ಮತ್ತು ಪತ್ನಿ ಹತ್ಯೆ: ತಲೆ ಜಜ್ಜಿ ಮಾಂಸ ಸೇವಿಸಿದ ವ್ಯಕ್ತಿ
ರಸ್ತೆಗೆ ಅಡ್ಡವಾಗಿ ಹರಡಿದ್ದ ಮಾಂಜಾ ದಾರ ಬೈಕ್ ಸವಾರನ ಕುತ್ತಿಗೆಯನ್ನು ತೀವ್ರವಾಗಿ ಕತ್ತರಿಸಿದ್ದು, ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿದ ಸಂಜೀವ್ ಕುಮಾರ್ ಹೊಸಮನಿ (48) ಕೊನೆಯುಸಿರೆಳೆದಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ತಂದೆಯ ಸಾವು ಮನೆಮಂದಿಗೆ ಅತೀವ ದುಃಖ ತಂದಿದೆ.
ಇದನ್ನು ಓದಿ: ಬೀದರ್: 99 ಲಕ್ಷ ಸಾಲ ವಾಪಸ್ ನೀಡಿಲ್ಲ ಆರೋಪ: ಬಸವಕಲ್ಯಾಣ ಶಾಸಕ ಶರಣು ಸಲಗರ್ ವಿರುದ್ಧ ಎಫ್ಐಆರ್!!
ಬಂಬುಳಗಿ ಗ್ರಾಮದ ನಿವಾಸಿಯಾಗಿದ್ದ ಸಂಜೀವ್ ಕುಮಾರ್ ಹೊಸಮನಿ, ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನ ತಂದೆಯಾಗಿದ್ದರು. ಸಂಕ್ರಾಂತಿ ಹಬ್ಬಕ್ಕೆ ಮಗಳನ್ನು ಕರೆದುಕೊಂಡು ಬರಲು ಬೈಕ್ನಲ್ಲಿ ಹೊರಟಿದ್ದ ವೇಳೆ, ಅಚಾನಕ್ ಗಾಳಿಪಟದ ಮಾಂಜಾ ದಾರ ಅವರ ಕುತ್ತಿಗೆಗೆ ಸಿಲುಕಿಕೊಂಡು ಭೀಕರ ಅಪಘಾತಕ್ಕೆ ಕಾರಣವಾಗಿದೆ. ಹಬ್ಬದ ಸಂತಸದಲ್ಲಿದ್ದ ಕುಟುಂಬಕ್ಕೆ ಈ ದುರ್ಘಟನೆ ಶೋಕದ ನೆರಳನ್ನು ತಂದಿದೆ.
ಸಂಜೀವ್ ಅವರ ನಾಲ್ಕೂ ಮಕ್ಕಳು ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದು, ಮೂವರು ಹೆಣ್ಣು ಮಕ್ಕಳಲ್ಲಿ ಒಬ್ಬಳು ಹುಮನಾಬಾದ್ ಪಟ್ಟಣದ ಹಾಸ್ಟೆಲ್ನಲ್ಲಿ ವಾಸವಿದ್ದು ಓದುತ್ತಿದ್ದಳು. ಹಬ್ಬದ ರಜೆಯ ಹಿನ್ನೆಲೆಯಲ್ಲಿ ಮಗಳನ್ನು ಮನೆಗೆ ಕರೆತರಲು ತಂದೆ ಹುಮನಾಬಾದ್ ಕಡೆ ಬೈಕ್ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ತಾಳಮಡಗಿ ಗ್ರಾಮದ ಬಳಿ ರಸ್ತೆಯ ಮಧ್ಯೆ ಅಡ್ಡವಾಗಿ ಬಿದ್ದಿದ್ದ ಗಾಳಿಪಟದ ಮಾಂಜಾ ದಾರ ಸಂಜೀವ್ ಅವರ ಕುತ್ತಿಗೆಗೆ ಸಿಕ್ಕಿ, ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಮನ್ನಾಏಖೆಳ್ಳಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ. ಕುಟುಂಬದ ಆಧಾರಸ್ತಂಭವಾಗಿದ್ದ ಸಂಜೀವ್ ಅವರನ್ನು ಕಳೆದುಕೊಂಡು ಮನೆಯವರು ದಿಕ್ಕು ತೋಚದ ಸ್ಥಿತಿಯಲ್ಲಿ ಇದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಜೀವ್ ಅವರ ಅಕಾಲಿಕ ಸಾವು ಪತ್ನಿಗೆ ಭಾರೀ ಆಘಾತ ಉಂಟುಮಾಡಿದೆ. ಮನೆ ಸಂಸಾರವನ್ನು ನಿಭಾಯಿಸಲು ಪತ್ನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೂ, ಇದೀಗ ಕುಟುಂಬದ ಮುಖ್ಯ ಆಧಾರವೇ ಕಳಚಿ ಬಿದ್ದಂತಾಗಿದೆ. ಮುಂದಿನ ದಿನಗಳಲ್ಲಿ ಹೆಂಡತಿ ಮತ್ತು ಮಕ್ಕಳ ಬದುಕು ಹೇಗಿರಲಿದೆ ಎಂಬ ಚಿಂತೆ ಸಂಬಂಧಿಕರನ್ನು ಕಾಡುತ್ತಿದ್ದು, ಮೃತರ ಮನೆಯಲ್ಲಿ ಶೋಕದ ಆಕ್ರಂದನ ಮುಗಿಲು ಮುಟ್ಟಿದೆ.







3 thoughts on “ಬೀದರ್: ಸಂಕ್ರಾಂತಿ ಹಬ್ಬಕ್ಕೆ ಮಗಳನ್ನ ಕರೆತರಲು ಹೊರಟ ತಂದೆ ಗಾಳಿಪಟದ ಮಾಂಜಾ ದಾರಕ್ಕೆ ಬಲಿ ..!”