ಬೆಂಗಳೂರು, ಜನವರಿ 12: ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲಿನಲ್ಲಿರುವ ಮಗನಿಗೆ ಮೊಬೈಲ್ ನೀಡಲು ಯತ್ನಿಸಿದ ತಾಯಿ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. ಮಗನ ಭೇಟಿಗೆ ಬಂದಿದ್ದ ಮಹಿಳೆ ತಮ್ಮ ಖಾಸಗಿ ಭಾಗದಲ್ಲಿ ಮೊಬೈಲ್ ಮರೆಮಾಚಿಕೊಂಡು ಜೈಲಿನೊಳಗೆ ಪ್ರವೇಶಿಸಲು ಯತ್ನಿಸಿದ್ದು, ತಪಾಸಣೆ ವೇಳೆ ಪತ್ತೆಯಾಗಿದೆ.
ಇದನ್ನು ಓದಿ: ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಗೆ 3 ತಿಂಗಳ ಜೈಲು ಶಿಕ್ಷೆ..!
ಇದನ್ನು ಓದಿ: ತಾಯಿ ಮತ್ತು ಪತ್ನಿ ಹತ್ಯೆ: ತಲೆ ಜಜ್ಜಿ ಮಾಂಸ ಸೇವಿಸಿದ ವ್ಯಕ್ತಿ
ಭರತ್ ಎಂಬ ವಿಚಾರಣಾಧೀನ ಕೈದಿಯನ್ನು ಭೇಟಿಯಾಗಲು ತಾಯಿ ಲಕ್ಷ್ಮೀ ನರಸಮ್ಮ (38) ಅವರು ವಿಸಿಟರ್ ಪಾಸ್ ಪಡೆದುಕೊಂಡು ಜನವರಿ 2ರಂದು ಮಧ್ಯಾಹ್ನ ಸುಮಾರು 12.10ರ ವೇಳೆಗೆ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು. ಸಾಮಾನ್ಯ ಸಂದರ್ಶನ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಕೆಎಸ್ಐಎಸ್ಎಫ್ ಸಿಬ್ಬಂದಿ ಹಾಗೂ ವೀಕ್ಷಕರು ನಡೆಸಿದ ಭೌತಿಕ ತಪಾಸಣೆಯ ವೇಳೆ, ಮಹಿಳೆಯ ಖಾಸಗಿ ಭಾಗದಲ್ಲಿ ಸಿಮ್ ಕಾರ್ಡ್ ಸಹಿತ ಬೇಸಿಕ್ ಕಂಪನಿಯ ನೀಲಿ ಬಣ್ಣದ ಮೊಬೈಲ್ ಪತ್ತೆಯಾಗಿದೆ.
ಈ ಸಂಬಂಧ ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಪರಮೇಶ್ ಹೆಚ್.ಎ ಅವರ ನಿರ್ದೇಶನದ ಮೇರೆಗೆ, ಸಿಬ್ಬಂದಿ ನೀಡಿದ ದೂರಿನ ಆಧಾರದಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಲಕ್ಷ್ಮೀ ನರಸಮ್ಮ ಹಾಗೂ ವಿಚಾರಣಾಧೀನ ಕೈದಿ ಭರತ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನು ಓದಿ: ಮಹಿಳೆಯ ಜೊತೆ ಲಿವಿಂಗ್ ರಿಲೇಶನ್ಶಿಪ್: ಪ್ರೇಯಸಿಗಾಗಿ ಕಳ್ಳತನ-ಸುಲಿಗೆಯಲ್ಲಿ ತೊಡಗಿದ ಯುವಕ ಈಗ ಜೈಲುಪಾಲು
ಎಫ್ಐಆರ್ನಲ್ಲಿ, ಕಾರಾಗೃಹದ ನಿಯಮಗಳನ್ನು ಉಲ್ಲಂಘಿಸಿ ನಿಷೇಧಿತ ವಸ್ತುವನ್ನು ಜೈಲಿನೊಳಗೆ ಸಾಗಿಸಲು ಯತ್ನಿಸಿರುವುದು ಹಾಗೂ ಭದ್ರತಾ ಸಿಬ್ಬಂದಿಯನ್ನು ತಪ್ಪಿಸಲು ಪ್ರಯತ್ನಿಸಿರುವುದು ಉಲ್ಲೇಖವಾಗಿದ್ದು, ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.






