ಬೆಂಗಳೂರು ಮೈಕೋ ಲೇಔಟ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಚೇಂದ್ರ ವಿರುದ್ಧ ಅವರ ಪತ್ನಿ ಸೀನಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವರದಕ್ಷಿಣೆಗಾಗಿ ಮಾನಸಿಕ ಕಿರುಕುಳ ನೀಡುವುದು, ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು ಹಾಗೂ ಜೀವ ಬೆದರಿಕೆ ಹಾಕುತ್ತಿರುವುದಾಗಿ ಸೀನಾ ದೂರು ನೀಡಿದ್ದಾರೆ.
ಇದನ್ನು ಓದಿ: ಗದಗ: ಹಸೆಮಣೆ ಏರಬೇಕಿದ್ದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಸೇರಿ ಮೂವರು ಸಾವು!!
ಔರಾದ್ ತಾಲೂಕಿನ ಚಿಟಗುಪ್ಪ ಮೂಲದ ಸೀನಾ ಮತ್ತು ಮಚೇಂದ್ರ ಅವರ ವಿವಾಹ 2022ರ ಡಿಸೆಂಬರ್ 14ರಂದು ನಡೆಯಿತ್ತು. ಮದುವೆಗೆ ಸುಮಾರು 26 ಲಕ್ಷ ರೂ. ವೆಚ್ಚವಾಗಿದ್ದು, ಆರಂಭದಲ್ಲಿ ದಂಪತಿ ಬೆಂಗಳೂರಿನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ನಂತರ ಆರೋಗ್ಯದ ನೆಪ ಹೇಳಿ ಸೀನಾರನ್ನು ತವರು ಮನೆಗೆ ಕಳುಹಿಸಿದ ಮಚೇಂದ್ರ, ಸುಮಾರು 15 ತಿಂಗಳು ಕಳೆದರೂ ಅವರನ್ನು ಮರಳಿ ಕರೆದುಕೊಂಡು ಹೋಗಿಲ್ಲ ಎಂದು ಆರೋಪಿಸಲಾಗಿದೆ.
ಇದನ್ನು ಓದಿ: ಚಿಕ್ಕಬಳ್ಳಾಪುರ: ಅಣ್ಣ–ತಂಗಿಯ ಪವಿತ್ರ ಸಂಬಂಧಕ್ಕೆ ಧಕ್ಕೆ: ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ 21 ವರ್ಷದ ಯುವತಿ ನೇಣಿಗೆ ಶರಣು
ಮಕ್ಕಳಾಗಿಲ್ಲ ಎಂಬ ಕಾರಣ ಮುಂದಿಟ್ಟು ವರದಕ್ಷಿಣೆ ಬೇಡಿಕೆ ಇಡಲಾಗುತ್ತಿದೆ ಎಂದು ಸೀನಾ ಆರೋಪಿಸಿದ್ದಾರೆ. ಇದಲ್ಲದೆ ಅಶ್ಲೀಲ ಸಂದೇಶಗಳ ಮೂಲಕ ಮಾನಸಿಕ ಹಿಂಸೆ ನೀಡಲಾಗುತ್ತಿದ್ದು, “ನಿನ್ನ ಅಕ್ಕನ ಮಗಳನ್ನು ಮದುವೆ ಮಾಡಿಕೊಳ್ಳುತ್ತೇನೆ” ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ. ತನ್ನ ಜೀವಕ್ಕೆ ಅಪಾಯವಿದೆ ಎಂಬ ಭಯದಲ್ಲಿರುವುದಾಗಿ ಸೀನಾ ಹೇಳಿದ್ದಾರೆ.
ಈ ಸಂಬಂಧ ಔರಾದ್ ತಾಲೂಕಿನ ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ FIR ದಾಖಲಾಗಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ. ನಂತರ ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲೂ ದೂರು ಸಲ್ಲಿಸಿದರೂ ಅಲ್ಲಿಯೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸೀನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮದುವೆಗೆ ತೆಗೆದುಕೊಂಡ 26 ಲಕ್ಷ ರೂ. ಸಾಲ ಇನ್ನೂ ತೀರಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ವರದಕ್ಷಿಣೆ ಬೇಡಿಕೆ ಇಡುವುದು ಅನ್ಯಾಯ ಎಂದು ಅವರು ಹೇಳಿದ್ದಾರೆ. “ಮಕ್ಕಳಾಗದೇ ಇರುವುದು ನನ್ನ ತಪ್ಪಲ್ಲ. ಆದರೂ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ದಯವಿಟ್ಟು ನನಗೆ ರಕ್ಷಣೆ ಮತ್ತು ನ್ಯಾಯ ಒದಗಿಸಿ” ಎಂದು ಅವರು ಮನವಿ ಮಾಡಿದ್ದಾರೆ.
ಈ ಪ್ರಕರಣವು ವರದಕ್ಷಿಣೆ ಹೆಸರಿನಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಮಾನಸಿಕ ಕಿರುಕುಳ, ಅಶ್ಲೀಲ ಸಂದೇಶಗಳು ಮತ್ತು ಜೀವ ಬೆದರಿಕೆಗಳಂತಹ ಗಂಭೀರ ಸಮಸ್ಯೆಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಪೊಲೀಸ್ ಇಲಾಖೆಯಲ್ಲಿರುವ ವ್ಯಕ್ತಿಯ ಮೇಲೆಯೇ ಆರೋಪ ಕೇಳಿಬಂದಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.
ಸಂತ್ರಸ್ತೆ ಇದೀಗ ರಾಜ್ಯ ಮಹಿಳಾ ಆಯೋಗ ಮತ್ತು ಉನ್ನತ ಅಧಿಕಾರಿಗಳ ಗಮನಕ್ಕೆ ಪ್ರಕರಣವನ್ನು ತರುವ ಪ್ರಯತ್ನದಲ್ಲಿದ್ದು, ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂಬ ಒತ್ತಾಯ ಹೆಚ್ಚುತ್ತಿದೆ.






