ಬೆಂಗಳೂರು (ಜ.12): ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಚುರುಕುಗೊಂಡಿದ್ದು, ಆರೋಪಿ ನಟಿ ಪವಿತ್ರಾ ಗೌಡ ಅವರಿಗೆ ಮನೆಯೂಟ ನೀಡುವ ಕುರಿತಂತೆ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜೈಲೂಟದಿಂದ ಅಲರ್ಜಿಯಾಗಿ ದೇಹದಾದ್ಯಂತ ಗುಳ್ಳೆಗಳು ಕಾಣಿಸಿಕೊಂಡಿವೆ ಎಂದು ದೂರಿದ್ದ ಪವಿತ್ರಾ ಗೌಡ ಅವರಿಗೆ ವಾರಕ್ಕೊಮ್ಮೆ ಮನೆಯೂಟ ನೀಡುವಂತೆ ಜೈಲು ಅಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಇದನ್ನು ಓದಿ: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರವಣಿಗೆ ಬರಲ್ಲವೇ?ಟ್ರೋಲ್ಗೆ ಗುರಿಯಾದ ಅಶ್ವಿನಿ ಗೌಡ
ಆರೋಪಿ ಪವಿತ್ರ ಗೌಡಗೆ ವಾರಕ್ಕೊಮ್ಮೆ ಮಾತ್ರ ಮನೆಯೂಟಕ್ಕೆ ಅವಕಾಶ
ಲಭ್ಯವಿರುವ ಮಾಹಿತಿಯ ಪ್ರಕಾರ, ಪವಿತ್ರಾ ಗೌಡ ಜೊತೆಗೆ ನಾಗರಾಜ್ ಮತ್ತು ಲಕ್ಷ್ಮಣ್ ಅವರಿಗೆ ವಾರಕ್ಕೊಮ್ಮೆ ಮಾತ್ರ ಮನೆಯೂಟ ಸವಿಯಲು ಕೋರ್ಟ್ ಅನುಮತಿ ನೀಡಿದೆ. ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಉಂಟಾದರೆ ಮಾತ್ರ ವೈದ್ಯರ ಸಲಹೆ ಮೇರೆಗೆ ಪ್ರತಿದಿನ ಮನೆಯೂಟ ನೀಡಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜೈಲು ಅಧಿಕಾರಿಗಳು–ವಕೀಲರ ಮಧ್ಯೆ ತೀವ್ರ ವಾದ
ಪವಿತ್ರಾ ಗೌಡ ಪರ ವಕೀಲ ನಾರಾಯಣಸ್ವಾಮಿ ಕೋರ್ಟ್ನಲ್ಲಿ ವಾದ ಮಂಡಿಸಿ, “ಜೈಲಿನ ಆಹಾರ ಸಮರ್ಪಕವಾಗಿಲ್ಲ. ಅನೇಕರಿಗೆ ಮನೆಯೂಟದ ಸೌಲಭ್ಯ ಸಿಗುತ್ತಿದ್ದು, ಕೋರ್ಟ್ ಆದೇಶವಿದ್ದರೂ ಪವಿತ್ರಾ ಗೌಡಗೆ ಅದನ್ನು ನೀಡುತ್ತಿಲ್ಲ. ಅವರ ಜನ್ಮದಿನದಂದೂ ಸಹ ಅವಕಾಶ ನೀಡಲಿಲ್ಲ” ಎಂದು ಜೈಲು ಅಧಿಕಾರಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನು ಓದಿ: ಬೆಂಗಳೂರು: ‘ಜೈ ಬಾಂಗ್ಲಾ’ ಘೋಷಣೆ ಕೂಗಿ ಆತಂಕ; ಅಕ್ರಮ ವಲಸಿಗ ಮಹಿಳೆ ಶರ್ಬಾನು ಬಂಧನ
ಇದಕ್ಕೆ ಪ್ರತಿಯಾಗಿ ಜೈಲು ಅಧಿಕಾರಿಗಳು, “ಜೈಲಿನಲ್ಲಿ ಸುಮಾರು 4,700 ಕೈದಿಗಳಿದ್ದು, ಎಲ್ಲರಿಗೂ ಉತ್ತಮ ಗುಣಮಟ್ಟದ ಆಹಾರ ಒದಗಿಸಲಾಗುತ್ತಿದೆ. ಪವಿತ್ರಾ ಗೌಡಗೆ ವಿಶೇಷ ರಿಯಾಯಿತಿ ನೀಡಿದರೆ ಇತರ ಕೈದಿಗಳೂ ಅದೇ ಬೇಡಿಕೆ ಇಡುತ್ತಾರೆ. ಇದು ಭದ್ರತೆ ಹಾಗೂ ಶಿಸ್ತಿನ ದೃಷ್ಟಿಯಿಂದ ಸರಿಯಲ್ಲ” ಎಂದು ಕೋರ್ಟ್ಗೆ ಮನವಿ ಮಾಡಿದರು. ಎರಡೂ ಕಡೆಯ ವಾದ ಆಲಿಸಿದ 57ನೇ ಸೆಷನ್ಸ್ ಕೋರ್ಟ್, ಕೊನೆಗೆ ವಾರಕ್ಕೊಮ್ಮೆ ಮನೆಯೂಟಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದೆ.
“ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ಹಾಜರಾತು ಮಾಡಿದರು”
ಈ ಪ್ರಕರಣದ ಟ್ರಯಲ್ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ. ಜೈಲಿನಿಂದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ ಏಳು ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದು, ಉಳಿದ 10 ಆರೋಪಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾದರು. ಈ ನಡುವೆ ಆರೋಪಿ ಪ್ರದೂಷ್ ತನ್ನ ತಂದೆಯ ತಿಥಿ ಕಾರ್ಯದ ಹಿನ್ನೆಲೆಯಲ್ಲಿ ಜನವರಿ 17ರಿಂದ 22ರವರೆಗೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯೂ ನಾಳೆಗೆ ನಡೆಯಲಿದೆ.






