ಕಾರವಾರ: ಇತ್ತೀಚಿನ ದಿನಗಳಲ್ಲಿ ಕಳ್ಳರು ಅತೀ ಚಾಣಾಕ್ಷರಾಗುತ್ತಿದ್ದು, ಊಹೆಗೂ ಮೀರಿದ ರೀತಿಯಲ್ಲಿ ಕಳ್ಳತನದ ಸ್ಕೆಚ್ಗಳನ್ನು ರೂಪಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹದೇ ಒಂದು ಅಚ್ಚರಿಯ ಘಟನೆ ಬೆಳಕಿಗೆ ಬಂದಿದ್ದು, ಶೌಚಾಲಯದ ಗೋಡೆ ಕೊರೆದು ಬ್ಯಾಂಕ್ ದರೋಡೆಗೆ ಯತ್ನಿಸಿರುವ ಪ್ರಕರಣ ವರದಿಯಾಗಿದೆ.
ಇದನ್ನು ಓದಿ: AI ಯುವತಿಜೊತೆ ವಿಡಿಯೋ ಕಾಲ್ ಮೋಸದಲ್ಲಿ ₹1.53 ಲಕ್ಷ ಕಳೆದುಕೊಂಡ ಯುವಕ
ಉತ್ತರ ಕನ್ನಡ ಜಿಲ್ಲೆಯ ಸುಂಕಸಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನ ದಳ ಹಾಗೂ ತಜ್ಞರ ತಂಡದಿಂದ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಒಳಗೆ ನೇರವಾಗಿ ಪ್ರವೇಶಿಸಿದರೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುವ ಸಾಧ್ಯತೆ ಇರುವುದರಿಂದ, ಕಳ್ಳರು ವಿಭಿನ್ನ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಶೌಚಾಲಯದಲ್ಲಿ ಸಾಮಾನ್ಯವಾಗಿ ಕ್ಯಾಮೆರಾ ವ್ಯವಸ್ಥೆ ಇರದ ಕಾರಣ, ಅದರ ಹಿಂಭಾಗದ ಗೋಡೆಯನ್ನು ಕೊರೆದು ಬ್ಯಾಂಕ್ ಒಳಗೆ ನುಗ್ಗಿದ್ದಾರೆ. ಬಳಿಕ ಸ್ಟ್ರಾಂಗ್ ರೂಮ್ ಗೋಡೆಯನ್ನು ಒಡೆಯಲು ಯತ್ನಿಸಲಾಗಿದೆ.
ಆದರೆ ಸ್ಟ್ರಾಂಗ್ ರೂಮ್ ಗೋಡೆ ಅತ್ಯಂತ ಭದ್ರವಾಗಿದ್ದರಿಂದ ಕಳ್ಳರ ಪ್ರಯತ್ನ ವಿಫಲವಾಗಿದೆ. ಯಾವುದೇ ಹಣ ದೊರಕದೇ ಕಳ್ಳರು ಬರಿಗೈಯಲ್ಲಿ ಪರಾರಿಯಾಗಿದ್ದಾರೆ. ಇದೀಗ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಆರೋಪಿಗಳ ಜಾಡು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಸ್ಟ್ರಾಂಗ್ ರೂಮ್ ಭದ್ರವಾಗಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.






