ಪ್ರತಿಯೊಬ್ಬರ ಜೀವನದಲ್ಲೂ ಅನೇಕ ಕನಸುಗಳು ಇರುತ್ತವೆ. ಕೆಲವು ಕನಸುಗಳು ಕಾಲಕ್ರಮೇಣ ಸಾಕಾರಗೊಳ್ಳುತ್ತವೆ, ಇನ್ನು ಕೆಲವು ಕನಸುಗಳು ಮನದೊಳಗೇ ಉಳಿದುಕೊಂಡು ಜೀವನದ ಜೊತೆ ಮಸುಕಾಗಿಬಿಡುತ್ತವೆ. ವಯಸ್ಸು ಹೆಚ್ಚಾದಂತೆ ಅಜ್ಜ–ಅಜ್ಜಿ ಅಥವಾ ತಂದೆ–ತಾಯಿಯನ್ನು ಮಕ್ಕಳು ಹಾಗೂ ಮೊಮ್ಮಕ್ಕಳು ಕಡೆಗಣಿಸುವ ಘಟನೆಗಳು ಸಾಮಾನ್ಯ. ಆದರೆ ಇಲ್ಲಿ ಒಬ್ಬ ಮೊಮ್ಮಗಳು ತನ್ನ ತಾತ–ಅಜ್ಜಿಯ ಹೃದಯದ ಆಸೆಗೆ ಮೌಲ್ಯ ನೀಡಿ, ಅದನ್ನು ನಿಜವಾಗಿಸಿದ್ದಾರೆ.
ಇದನ್ನು ಓದಿ: ವಿಚ್ಛೇದನ ಪ್ರಕರಣದಲ್ಲಿ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ಸಂಬಂಧ: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ
ಮೊದಲ ಬಾರಿಗೆ ಅಜ್ಜ ಮತ್ತು ಅಜ್ಜಿ ಸಮುದ್ರವನ್ನು ಕಣ್ಣಾರೆ ನೋಡಿ ಅಪಾರ ಸಂತೋಷವನ್ನು ಅನುಭವಿಸಿದ್ದಾರೆ. ಹಳ್ಳಿಯಲ್ಲಿ ಜೀವನ ಕಳೆದ ಈ ವೃದ್ಧ ದಂಪತಿ ತಮ್ಮ ಜೀವನದಲ್ಲಿ ಒಮ್ಮೆಯೂ ಪ್ರವಾಸಕ್ಕೆ ಹೋಗಿರಲಿಲ್ಲ. ಸಮುದ್ರವನ್ನು ನೇರವಾಗಿ ನೋಡುವ ಅವಕಾಶವೂ ಅವರಿಗೆ ದೊರಕಿರಲಿಲ್ಲ. ಈ ವಿಷಯವನ್ನು ಅವರ ಮೊಮ್ಮಗಳೇ ಬಹಿರಂಗಪಡಿಸಿದ್ದಾರೆ. ತಾತ–ಅಜ್ಜಿಯ ಆಸೆಯನ್ನು ಅರಿತ ಮೊಮ್ಮಗಳು, ಅಚ್ಚರಿಯ ರೀತಿಯಲ್ಲಿ ಅವರನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಸಮುದ್ರದ ಎದುರು ನಿಂತ ಕ್ಷಣದಲ್ಲೇ ಅಜ್ಜ–ಅಜ್ಜಿ ಇಬ್ಬರೂ ನೀರನ್ನು ಸ್ಪರ್ಶಿಸಿ ಭಕ್ತಿಯಿಂದ ನಮಸ್ಕಾರ ಮಾಡಿದ್ದಾರೆ. ಸಮುದ್ರದ ವಿಶಾಲತೆ, ಮರಳು ಮತ್ತು ನೀರಿನಲ್ಲಿ ಕೆಲವು ಹೆಜ್ಜೆ ಇಟ್ಟು, ತಮ್ಮ ಬಹುಕಾಲದ ಕನಸು ಈಡೇರಿದ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಕೆಲ ಹೊತ್ತು ಸಮುದ್ರದ ಅಲೆಗಳನ್ನು ನೋಡಿಯೇ ಜೀವನ ಸಾರ್ಥಕವಾಯಿತು ಎಂಬ ಭಾವನೆ ಅವರ ಮುಖದಲ್ಲಿ ಮೂಡಿತ್ತು.
ಈ ಭಾವುಕ ಘಟನೆಯ ವಿಡಿಯೋವನ್ನು ಮುಂಬೈನ ದಿವ್ಯಾ ತಾವ್ಡೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ಅಜ್ಜ–ಅಜ್ಜಿಯನ್ನು ಸಮುದ್ರಕ್ಕೆ ಕರೆದುಕೊಂಡು ಹೋಗಿ ಅವರ ಕೊನೆಯ ಆಸೆಯನ್ನು ನೆರವೇರಿಸಿದ್ದೇನೆ. ಅವರು ಜೀವನಪೂರ್ತಿ ಕೇವಲ ಕೇಳಿಕೊಂಡಿದ್ದ ಅನುಭವವನ್ನು ನಾನು ನಿಜವಾಗಿಸಿದ್ದೇನೆ ಎಂದು ದಿವ್ಯಾ ಭಾವೋದ್ರೇಕದಿಂದ ಹೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ಹಾಗೂ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.






