---Advertisement---

ಯಶ್ ಅಭಿನಯದ ‘ಟಾಕ್ಸಿಕ್’ ವಿರುದ್ಧ ಸೆನ್ಸಾರ್ ಮಂಡಳಿಗೆ ದೂರು

On: January 11, 2026 7:03 AM
Follow Us:
---Advertisement---

ನಟ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್‌ನಲ್ಲಿ ಅಸಹ್ಯ ಹಾಗೂ ಹಸಿಬಿಸಿ ದೃಶ್ಯಗಳಿದ್ದು, ಯಾವುದೇ ಗೈಡ್‌ಲೈನ್ಸ್ ಇಲ್ಲದೆ ಪ್ರಸಾರ ಮಾಡಲಾಗುತ್ತಿದೆ ಎಂದು ವಕೀಲ ಲೋಹಿತ್ ಅವರು ಕೇಂದ್ರ ಸೆನ್ಸಾರ್ ಮಂಡಳಿಗೆ ದೂರು ಸಲ್ಲಿಸಿದ್ದಾರೆ. ಟೀಸರ್ ಪ್ರಸಾರವನ್ನು ತಕ್ಷಣ ನಿಲ್ಲಿಸಬೇಕು ಅಥವಾ ಸ್ಪಷ್ಟ ಗೈಡ್‌ಲೈನ್ಸ್‌ಗಳೊಂದಿಗೆ ಮಾತ್ರ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನು ಓದಿ: 2026 ರಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳು

ಮಾಧ್ಯಮಗಳೊಂದಿಗೆ ಮಾತನಾಡಿದ ಲೋಹಿತ್, ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ವಯಸ್ಕರಿಗೆ ಮಾತ್ರ ಎನ್ನುವ ಕಮ್ಯುನಿಟಿ ಗೈಡ್‌ಲೈನ್ಸ್ ಇದ್ದರೂ, ಟಾಕ್ಸಿಕ್ ಟೀಸರ್‌ನಲ್ಲಿ ಅವುಗಳನ್ನು ಪಾಲಿಸಲಾಗಿಲ್ಲ. ಇದರಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ಆರೋಪಿಸಿದ್ದಾರೆ. ಗೈಡ್‌ಲೈನ್ಸ್ ನೀಡಿದರೆ, ಟೀಸರ್ ನೋಡಬೇಕೋ ಬೇಡವೋ ಎನ್ನುವ ನಿರ್ಧಾರವನ್ನು ವೀಕ್ಷಕರೇ ತೆಗೆದುಕೊಳ್ಳಬಹುದು ಎಂದರು.

“ಸೆನ್ಸಾರ್ ಮಂಡಳಿ ಚಿತ್ರಗಳಿಗೆ U ಅಥವಾ A ಪ್ರಮಾಣಪತ್ರ ನೀಡುತ್ತದೆ. ಥಿಯೇಟರ್‌ನಲ್ಲಿ ವಯಸ್ಸು ಪರಿಶೀಲನೆ ಇರುತ್ತದೆ. ಆದರೆ ಟೀಸರ್ ಎಲ್ಲರೂ ನೋಡಬಹುದಾಗಿದೆ. ಟಾಕ್ಸಿಕ್ ಕುಟುಂಬ ಸಮೇತ ಅಥವಾ ಮಕ್ಕಳೊಂದಿಗೆ ನೋಡಬಹುದಾದ ಸಿನಿಮಾ ಅಲ್ಲ” ಎಂದು ಲೋಹಿತ್ ಹೇಳಿದ್ದಾರೆ. ಟೀಸರ್ ನೋಡಿ ಅನೇಕ ಕುಟುಂಬಗಳು ಅಸಮಾಧಾನ ವ್ಯಕ್ತಪಡಿಸಿದ್ದನ್ನೂ ಅವರು ಉಲ್ಲೇಖಿಸಿದ್ದಾರೆ.

“ನನಗೆ ಯಾವುದೇ ನಟ ಅಥವಾ ಚಿತ್ರರಂಗದ ವಿರುದ್ಧ ವಿರೋಧವಿಲ್ಲ. ಆದರೆ ನಮ್ಮ ಸಮಾಜದ ಮಕ್ಕಳು ಮುಖ್ಯ. ಮಕ್ಕಳಿಗೆ ಸೂಕ್ತವಲ್ಲದ ವಿಷಯಗಳಿಗೆ ಮುನ್ನಚ್ಚರಿಕೆ ನೀಡಬೇಕು. ಗೈಡ್‌ಲೈನ್ಸ್ ಇಲ್ಲದೆ ಟೀಸರ್ ಬಿಡುಗಡೆ ಮಾಡಬಾರದು” ಎಂದು ಅವರು ಹೇಳಿದ್ದಾರೆ. ಈಗಿರುವ ಟೀಸರ್ ಹಿಂಪಡೆಯಬೇಕು ಮತ್ತು ಸರಿಯಾದ ಎಚ್ಚರಿಕೆ ಸೂಚನೆಗಳೊಂದಿಗೆ ಮಾತ್ರ ಮರುಬಿಡುಗಡೆ ಮಾಡಬೇಕು ಎಂದು ಸೆನ್ಸಾರ್ ಮಂಡಳಿ ನಿರ್ದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದು ಯಾವುದೇ ಪ್ರಚಾರಕ್ಕಾಗಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಲೋಹಿತ್, “ನಿರ್ಮಾಪಕರು ಸಿನಿಮಾ ಮಾಡಲಿ, ಆದರೆ ಅಶ್ಲೀಲತೆಯ ವೈಭವೀಕರಣ ಬೇಡ” ಎಂದು ಹೇಳಿದರು.

Join WhatsApp

Join Now

RELATED POSTS