ಗದರಿದ, ಗರಿಗರಿಯಾದ ದೋಸೆ ತಯಾರಿಸಲು ಬೇಕಾದ ಏಳು ಪ್ರಮುಖ ಅಂಶಗಳನ್ನು ಈ ಲೇಖನ ವಿವರಿಸುತ್ತದೆ. ಸರಿಯಾದ ಅಕ್ಕಿ–ಉದ್ದಿನಬೇಳೆ ಅನುಪಾತ, ಹಿಟ್ಟಿನ ಹುದುಗುವಿಕೆ, ಬ್ಯಾಟರ್ನ ಸ್ಥಿರತೆ ಹಾಗೂ ಕಾವಲಿಯ ಮೇಲೆ ದೋಸೆ ಬೇಯಿಸುವ ಸರಿಯಾದ ವಿಧಾನಗಳ ಬಗ್ಗೆ ಇಲ್ಲಿವೆ ಉಪಯುಕ್ತ ಸಲಹೆಗಳು. ದೋಸೆ ಜೀರ್ಣಿಸಿಕೊಳ್ಳಲು ಸುಲಭವಾದ ಆರೋಗ್ಯಕರ ಆಹಾರವಾಗಿದ್ದು, ಇಂದು ದೇಶದ ಯಾವುದೇ ಭಾಗದಲ್ಲೂ ಜನಪ್ರಿಯವಾಗಿದೆ. ಮಾರುಕಟ್ಟೆಯಲ್ಲಿ ಇನ್ಸ್ಟಂಟ್ ದೋಸೆ ಹಿಟ್ಟು ಲಭ್ಯವಿದ್ದರೂ, ಮನೆಯಲ್ಲೇ ತಯಾರಿಸಿದ ಹಿಟ್ಟಿನ ರುಚಿ ಮತ್ತು ಗುಣಮಟ್ಟ ಅದಕ್ಕಿಂತ ವಿಭಿನ್ನವಾಗಿರುತ್ತದೆ ಎಂಬುದು ಬಹುತೇಕರ ಅಭಿಪ್ರಾಯ.
ಇದನ್ನು ಓದಿ: ಭಾರತದ ಸಿಹಿ ತಿಂಡಿ ರಾಜಧಾನಿ ಯಾವುದು ಅಂತ ಗೊತ್ತಾ?
ದೋಸೆ ಹಿಟ್ಟು ತಯಾರಿಸುವುದರಿಂದ ಹಿಡಿದು ಕಾವಲಿಯ ಮೇಲೆ ಸುರಿದು ಬೇಯಿಸುವವರೆಗೂ ಪ್ರತಿಯೊಂದು ಹಂತವೂ ಮುಖ್ಯ. ಹಿಟ್ಟು ಸರಿಯಾಗಿ ತಯಾರಾಗದಿದ್ದರೆ ದೋಸೆ ಪ್ಯಾನ್ಗೆ ಅಂಟಿಕೊಳ್ಳುತ್ತದೆ. ಆದ್ದರಿಂದ ದೋಸೆ ಗರಿಗರಿಯಾಗಲು ಈ ಪ್ರಮುಖ ಅಂಶಗಳನ್ನು ಗಮನಿಸುವುದು ಅಗತ್ಯ.
ಮೊದಲನೆಯದಾಗಿ, ದೋಸೆ ಮಾಡಲು ಸರಿಯಾದ ಉದ್ದಿನಬೇಳೆ–ಅಕ್ಕಿ ಅನುಪಾತ ಬಹಳ ಮುಖ್ಯ. ಸರಿಯಾದ ಪ್ರಮಾಣ ಇಲ್ಲದಿದ್ದರೆ ದೋಸೆ ಕ್ರಿಸ್ಪಿಯಾಗುವುದಿಲ್ಲ. ಪರಿಪೂರ್ಣ ದೋಸೆಗಾಗಿ ನಾಲ್ಕು ಕಪ್ ಅಕ್ಕಿ ಮತ್ತು ಒಂದು ಕಪ್ ಉದ್ದಿನಬೇಳೆಯನ್ನು ನಾಲ್ಕು ಗಂಟೆ ಅಥವಾ ರಾತ್ರಿಯಿಡೀ ನೀರಿನಲ್ಲಿ ನೆನೆಸಬೇಕು. ಬಳಿಕ ಅವುಗಳನ್ನು ಪ್ರತ್ಯೇಕವಾಗಿ ರುಬ್ಬಿ, ಪೇಸ್ಟ್ ತರಹದ ಬ್ಯಾಟರ್ ತಯಾರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಇದನ್ನು ಓದಿ: ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಬಯಸುತ್ತಿದ್ದೀರಾ? ಹಾಗಿದ್ರೆ ಮಲಗುವ ಮುನ್ನ ಈ ಸರಳ ಕ್ರಮಗಳನ್ನು ಅನುಸರಿಸಿ..
ಎರಡನೆಯದಾಗಿ, ಹಿಟ್ಟಿನ ಹುದುಗುವಿಕೆ ಅತ್ಯಂತ ನಿರ್ಣಾಯಕ ಹಂತ. ಹಿಟ್ಟು ಸರಿಯಾಗಿ ಹುದುಗದೆ ಇದ್ದರೆ ದೋಸೆ ಎಷ್ಟು ಪ್ರಯತ್ನಿಸಿದರೂ ಚೆನ್ನಾಗಿ ಬರದು. ಹಿಟ್ಟನ್ನು ಸಣ್ಣ ಪಾತ್ರೆಯಲ್ಲಿ ಇಡುವ ಬದಲು ದೊಡ್ಡ ಪಾತ್ರೆಯಲ್ಲಿ ಇಡುವುದು ಉತ್ತಮ. ಇದರಿಂದ ಹಿಟ್ಟು ವಿಸ್ತರಿಸಲು ಮತ್ತು ಸರಿಯಾಗಿ ಹುದುಗಲು ಸಾಕಷ್ಟು ಜಾಗ ಸಿಗುತ್ತದೆ.
ಮೂರನೆಯದಾಗಿ, ಹುದುಗುವಿಕೆ ಸಮಯಕ್ಕೆ ಹವಾಮಾನವೂ ಪ್ರಭಾವ ಬೀರುತ್ತದೆ. ಬೇಸಿಗೆಯಲ್ಲಿ ಹಿಟ್ಟು ಬೇಗ ಹುದುಗುತ್ತದೆ. ಆದರೆ ಚಳಿಗಾಲದಲ್ಲಿ ಇದಕ್ಕೆ 12–15 ಗಂಟೆಗಳವರೆಗೆ ಬೇಕಾಗಬಹುದು. ಸಾಮಾನ್ಯವಾಗಿ ದೋಸೆ ಹಿಟ್ಟು 8 ರಿಂದ 10 ಗಂಟೆಗಳ ಕಾಲ ಹುದುಗಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ನಾಲ್ಕನೆಯದಾಗಿ, ರುಬ್ಬಿದ ದೋಸೆ ಹಿಟ್ಟನ್ನು ತಕ್ಷಣ ಫ್ರಿಜ್ನಲ್ಲಿ ಇಡುವುದನ್ನು ತಪ್ಪಿಸಬೇಕು. ತಂಪಾದ ತಾಪಮಾನ ಹುದುಗುವಿಕೆಯನ್ನು ನಿಧಾನಗೊಳಿಸುತ್ತದೆ ಅಥವಾ ಸಂಪೂರ್ಣವಾಗಿ ನಿಲ್ಲಿಸಬಹುದು. ಹಿಟ್ಟು ಸಂಪೂರ್ಣವಾಗಿ ಹುದುಗಿದ ನಂತರ ಮಾತ್ರ ಅಗತ್ಯವಿದ್ದರೆ ಫ್ರಿಜ್ನಲ್ಲಿ ಇಡುವುದು ಉತ್ತಮ.
ಐದನೆಯದಾಗಿ, ಬ್ಯಾಟರ್ನ ಗಟ್ಟಿತನ ಸರಿಯಾಗಿರಬೇಕು. ಅದು ತುಂಬಾ ದಪ್ಪವಾಗಿಯೂ ಇರಬಾರದು, ತುಂಬಾ ತೆಳ್ಳಗಾಗಿಯೂ ಇರಬಾರದು. ಹರಿಯುವಂತೆ ಇದ್ದರೆ ದೋಸೆ ಚೆನ್ನಾಗಿ ಹಬ್ಬುತ್ತದೆ ಮತ್ತು ಸಮವಾಗಿ ಬೇಯುತ್ತದೆ.
ಆರನೆಯದಾಗಿ, ದೋಸೆ ಹಿಟ್ಟನ್ನು ಕೋಣೆಯ ಉಷ್ಣಾಂಶದಲ್ಲೇ ಬಳಸುವುದು ಉತ್ತಮ. ಫ್ರಿಜ್ನಲ್ಲಿ ಇಟ್ಟ ಹಿಟ್ಟನ್ನು ನೇರವಾಗಿ ಬಳಸದೆ, ಸಾಮಾನ್ಯ ತಾಪಮಾನಕ್ಕೆ ಬಂದ ನಂತರ ದೋಸೆ ಹಾಕಬೇಕು. ಇದರಿಂದ ದೋಸೆ ಚೆನ್ನಾಗಿ ಬರುತ್ತದೆ.
ಏಳನೆಯದಾಗಿ, ದೋಸೆ ಬೇಯಿಸುವ ವಿಧಾನವೂ ಬಹಳ ಮುಖ್ಯ. ಮೊದಲು ಪ್ಯಾನ್ ಚೆನ್ನಾಗಿ ಬಿಸಿ ಮಾಡಬೇಕು. ನಂತರ ಸ್ವಲ್ಪ ನೀರು ಚಿಮ್ಮಿ, ಆವಿಯಾದ ಬಳಿಕ ಎಣ್ಣೆ ಹಚ್ಚಬೇಕು. ಬ್ಯಾಟರ್ ಸುರಿಸುವಾಗ ಉರಿ ಕಡಿಮೆ ಇರಲಿ. ನಂತರ ಮಧ್ಯಮ ಉರಿಯಲ್ಲಿ ಎರಡೂ ಬದಿಗಳು ಗರಿಗರಿಯಾಗುವವರೆಗೆ ಬೇಯಿಸಿದರೆ ದೋಸೆ ಪರ್ಫೆಕ್ಟ್ ಆಗಿ ಸಿದ್ಧವಾಗುತ್ತದೆ.






