ಐದು ವರ್ಷದ ಪುಟ್ಟ ಬಾಲಕಿ ಮಲಗಿದ್ದ ಸಮಯದಲ್ಲಿ ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡಿದ್ದಾಳೆಂಬ ಕಾರಣಕ್ಕೆ ಆಕೆಯ ಮಲತಾಯಿ ಮಗುವಿನ ಗುಪ್ತಾಂಗವನ್ನು ಸುಟ್ಟಿರುವ ಹೀನ ಕೃತ್ಯ ಉತ್ತರ ಕೇರಳದ ಕಾಂಜಿಕೋಡ್ ಸಮೀಪ ಕಳೆದ ವಾರ ನಡೆದಿದೆ.
ಇದನ್ನು ಓದಿ: ನಿವೃತ್ತಿ ಅಂಚಿನಲ್ಲಿ ಸ್ಫೋಟಕ ಸತ್ಯ: ಸರ್ಕಾರಿ ಶಾಲೆಯಲ್ಲಿ 30 ವರ್ಷ ಸೇವೆ ಸಲ್ಲಿಸಿದ್ದ ಪಾಕಿಸ್ತಾನ ಪ್ರಜೆ..!
ಅಂಗನವಾಡಿಯಲ್ಲಿ ಕುಳಿತುಕೊಳ್ಳಲು ಬಾಲಕಿ ತೀವ್ರ ನೋವು ಅನುಭವಿಸುತ್ತಿರುವುದನ್ನು ಗಮನಿಸಿದ ಶಿಕ್ಷಕಿ ಕಾರಣ ಕೇಳಿದಾಗ, ಮಲತಾಯಿ ಮಾಡಿದ ಅಮಾನುಷ ವರ್ತನೆಯ ಬಗ್ಗೆ ಮಗು ತಿಳಿಸಿದೆ.
ಮಗುವಿನ ಗುಪ್ತಾಂಗವನ್ನು ಪರಿಶೀಲಿಸಿದ ಅಂಗನವಾಡಿ ಶಿಕ್ಷಕಿ ಗಾಯಗಳಿರುವುದನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಿಹಾರ ಮೂಲದ ಮಲತಾಯಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿತ ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಬಾಲ ನ್ಯಾಯ ಕಾಯ್ದೆಯ ಸಂಬಂಧಿತ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆ ಪುಟ್ಟ ಬಾಲಕಿ ಮಕ್ಕಳ ಕಲ್ಯಾಣ ಸಮಿತಿ (CWC) ಆರೈಕೆಯಲ್ಲಿದೆ. ಈ ಹಿಂದೆ ಕೂಡ ಮಲತಾಯಿ ಇದೇ ರೀತಿಯಲ್ಲಿ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಸ್ಥಳೀಯರು ಹೇಳಿದ್ದು, ಈ ಆರೋಪಗಳ ಬಗ್ಗೆ ಪೊಲೀಸರು ತನಿಖೆ ನಡೆಸಿ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.






