ಅಮೆರಿಕದಲ್ಲಿ ಸುಮಾರು 309 ಪೌಂಡ್ (ಸುಮಾರು 150 ಕೆಜಿ) ತೂಕದ, ಅಂದಾಜು 7 ದಶಲಕ್ಷ ಡಾಲರ್ ಮೌಲ್ಯದ ಕೊಕೆನ್ ಸಾಗಾಟ ಮಾಡುತ್ತಿದ್ದ ಇಬ್ಬರು ಭಾರತೀಯ ಮೂಲದ ಲಾರಿ ಚಾಲಕರನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದಾರೆ. ಈ ಘಟನೆ ಮಾದಕ ದ್ರವ್ಯ ಜಾಲದ ಭಾರೀ ಬಲೆಯನ್ನು ಬಹಿರಂಗಪಡಿಸಿದೆ.
ಇದನ್ನು ಓದಿ: ಕರ್ನಾಟಕ ಸರಕಾರ ಜಾಹೀರಾತು ವೆಚ್ಚ: ಕರ್ನಾಟಕ ದಲ್ಲಿ ಓದುಗರೇ ಇಲ್ಲದ ನ್ಯಾಷನಲ್ ಹೆರಾಲ್ಡ್‌ಗೆ ದಿನಪತ್ರಿಕೆಗೆ 69% ಹಣ..!
ಬಂಧನಕ್ಕೊಳಗಾದವರು ಭಾರತೀಯ ಮೂಲದ ಗುರುಪ್ರೀತ್ ಸಿಂಗ್ (25) ಮತ್ತು ಜಸ್ವೀರ್ ಸಿಂಗ್ (30). ಗುರುಪ್ರೀತ್ ಸಿಂಗ್ 2023ರಲ್ಲಿ ಹಾಗೂ ಜಸ್ವೀರ್ ಸಿಂಗ್ 2017ರಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದರೆಂದು ತನಿಖೆಯಿಂದ ತಿಳಿದುಬಂದಿದೆ.
ಇವರು ಮಿನಿ ಲಾರಿಯಲ್ಲಿ ಸ್ಲೀಪರ್ ಬರ್ತ್ ಭಾಗದ ಕೆಳಗೆ ಬಾಕ್ಸ್‌ಗಳಲ್ಲಿ ಕೊಕೆನ್ ತುಂಬಿಸಿ, ಅಮೆರಿಕದ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಪತ್ತೆಯಾದ ಕೊಕೆನ್ ಸುಮಾರು 1,13,000 ಜನರನ್ನು ಕೊಲ್ಲುವಷ್ಟು ಅಪಾಯಕಾರಿ ಪ್ರಮಾಣದಲ್ಲಿತ್ತು.
ಹೋಂಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಶ್ವಾನಪಡೆಗಳು ಲಾರಿಯಲ್ಲಿ ಅನುಮಾನಾಸ್ಪದ ವಸ್ತುಗಳಿರುವ ಬಗ್ಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗಿದೆ. ಶ್ವಾನಗಳ ಎಚ್ಚರಿಕೆಯಿಂದಲೇ ಈ ಮಾದಕದ್ರವ್ಯ ಸಾಗಾಟದ ರಹಸ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾರಿಯ ಸ್ಲೀಪರ್ ಬರ್ತ್ ಭಾಗದ ಅಡಿಯಲ್ಲಿ ಕೊಕೆನ್ ತುಂಬಿದ ಹಲವಾರು ಬಾಕ್ಸ್‌ಗಳನ್ನು ಅಡಗಿಸಿಡಲಾಗಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರು ಚಾಲಕರನ್ನು ಪೌತಮ್ ಕೌಂಟಿ ಜೈಲಿಗೆ ಕಳುಹಿಸಲಾಗಿದ್ದು, ಅಕ್ರಮ ಮಾದಕದ್ರವ್ಯ ಸಾಗಾಟದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಆದರೆ ಬಂಧನಕ್ಕೊಳಗಾದ ಚಾಲಕರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ರಿಚಮಂಡ್‌ನ ಹೋಟೆಲ್‌ಗೆ ಸಾಮಾನು ಸಾಗಿಸುವಂತೆ ಕಂಪನಿಯಿಂದ ಸೂಚನೆ ಬಂದಿತ್ತು, ಬಾಕ್ಸ್‌ಗಳ ಒಳಗೆ ಏನಿದೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನೊಂದೆಡೆ, ಜಸ್ವೀರ್ ಸಿಂಗ್ ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು, ನಂತರ ಬಿಡುಗಡೆಗೊಂಡಿದ್ದನೆಂಬ ಅಂಶವೂ ತನಿಖೆ ವೇಳೆ ಬಹಿರಂಗವಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.






