ಕಾಠ್ಮಂಡು: ಭಾರತದ ಗಡಿಗೆ ಸಮೀಪವಿರುವ ನೇಪಾಳದ ಕೆಲವು ಭಾಗಗಳಲ್ಲಿ ಕೋಮು ಉದ್ವಿಗ್ನತೆ ಉಂಟಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪರ್ಸಾ ಜಿಲ್ಲೆಯ ಬಿರ್ಗುಂಜ್ ನಗರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಅವು ಹಿಂಸಾಚಾರಕ್ಕೆ ತಿರುಗಿವೆ ಎನ್ನಲಾಗಿದೆ.
ಇದನ್ನು ಓದಿ: ಹುಬ್ಬಳ್ಳಿ: ಬೆಚ್ಚಿಬೀಳಿಸುವ ಪೊಲೀಸ್ ಕೃತ್ಯ, ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಆರೋಪ, ವಿಡಿಯೋ ವೈರಲ್
ಉದ್ವಿಗ್ನತೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪರ್ಸಾ ಜಿಲ್ಲಾಡಳಿತವು ಬಿರ್ಗುಂಜ್ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆ ಭಾರತ–ನೇಪಾಳ ಗಡಿ ಪ್ರದೇಶದಲ್ಲಿ ಎಲ್ಲಾ ಸಂಚಾರ ಹಾಗೂ ಸಾಗಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ಗಲಭೆಗೆ ಕಾರಣವೇನು?
ಧನುಷಾ ಜಿಲ್ಲೆಯ ಕಮಲಾ ಪುರಸಭೆಗೆ ಸೇರಿದ ಹೈದರ್ ಅನ್ಸಾರಿ ಮತ್ತು ಅಮಾನತ್ ಅನ್ಸಾರಿ ಎಂಬ ಇಬ್ಬರು ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಸಮುದಾಯವನ್ನು ಅವಮಾನಿಸುವ ಹೇಳಿಕೆಗಳನ್ನು ಒಳಗೊಂಡ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಇದೇ ಘಟನೆ ಕೋಮು ಉದ್ವಿಗ್ನತೆಗೆ ಕಾರಣವಾಗಿದೆ ಎಂದು ನೇಪಾಳದ ಮಾಧ್ಯಮಗಳು ವರದಿ ಮಾಡಿವೆ.
ವೀಡಿಯೊ ವೈರಲ್ ಆದ ಬಳಿಕ ಸ್ಥಳೀಯರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಈ ವೀಡಿಯೊ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ಕಮಲಾದ ಸಖುವಾ ಮಾರನ್ ಪ್ರದೇಶದಲ್ಲಿ ಮಸೀದಿಯನ್ನು ಧ್ವಂಸಗೊಳಿಸಿರುವ ಘಟನೆ ಮತ್ತಷ್ಟು ಉದ್ವಿಗ್ನತೆಯನ್ನು ಹೆಚ್ಚಿಸಿ, ದೊಡ್ಡ ಮಟ್ಟದ ಗಲಭೆಗೆ ಕಾರಣವಾಯಿತು ಎಂದು ವರದಿಯಾಗಿದೆ.
ವೈರಲ್ ವೀಡಿಯೊ ವಿರುದ್ಧ ಪ್ರತಿಭಟನೆಗೆ ಇಳಿದಿದ್ದ ಹಿಂದೂ ಸಮುದಾಯದ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸ್ಥಳೀಯ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ಘಟನೆಗಳು ನಡೆದಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಾಗಿ ತಿಳಿದುಬಂದಿದೆ.
ಪರಿಸ್ಥಿತಿಯನ್ನು ಹತೋಟಿಗೆ ತರಲು ಬಿರ್ಗುಂಜ್ ಪ್ರದೇಶದಲ್ಲಿ ಕರ್ಫ್ಯೂ ಮುಂದುವರಿಸಲಾಗಿದ್ದು, ನಡೆದಿರುವ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ನೇಪಾಳದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.






