ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಯರಭಾಗ ಗ್ರಾಮ ಪಂಚಾಯಿತಿಯಲ್ಲಿ 2023–24ನೇ ಸಾಲಿನ 15ನೇ ಹಣಕಾಸು ಆಯೋಗದ ಯೋಜನೆಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಸಲ್ಲಿಸಲಾದ ದೂರುಗಳ ಮೇಲೆ ಇದುವರೆಗೆ ಸಮರ್ಪಕ ತನಿಖೆ ನಡೆಯದಿರುವುದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ.
ಇದನ್ನು ಓದಿ: ಔರದ್ ತಾಲೂಕಿನ ರೈತನಿಗೆ 50 ಸಾವಿರ ಬೆಳೆ ನಷ್ಟ ಪರಿಹಾರ ನೀಡಲು ಜೆಸ್ಕಾಂಗೆ ಕೋರ್ಟ್ ಆದೇಶ
ಇದನ್ನು ಓದಿ: ಬೀದರ್: ಕಬ್ಬಿನ ದರ ಟನ್‌ಗೆ ₹3150 ನಿಗದಿ
ದೂರುದಾರರ ಮಾಹಿತಿ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪಂಚಾಯತ್ ಆದೇಶದಂತೆ ತಾಲೂಕ ಪಂಚಾಯತ್ ಬಸವಕಲ್ಯಾಣಕ್ಕೆ ಸತತವಾಗಿ ಮೂರು ಬಾರಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಮೊದಲ ಆದೇಶವು 09-06-2025ರಂದು ಹೊರಬಂದಿದ್ದು, ಏಳು ದಿನಗಳೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಬಳಿಕ ಮಾನ್ಯ ನಿರ್ದೇಶಕರು (ಆಡಳಿತ–2), ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಬೆಂಗಳೂರು ಇವರಿಂದ 29-09-2025ರಂದು ಎರಡನೇ ಆದೇಶ ಹೊರಬಂದಿದೆ. ಮೂರನೇ ಆದೇಶವನ್ನು ಜಿಲ್ಲಾ ಪಂಚಾಯತ್ ಬೀದರ್ 04-11-2025ರಂದು ನೀಡಿದ್ದು, ಪುನಃ ಏಳು ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಆದರೂ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಮೇಶ್ (ಬಸವಕಲ್ಯಾಣ) ಇದುವರೆಗೆ ಯಾವುದೇ ತನಿಖೆ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಪಾತ್ರವೇನು ಎಂಬ ಪ್ರಶ್ನೆ ದೂರುದಾರರಿಗೆ ಕಾಡುತ್ತಿದೆ.
ದೂರುಗಳ ಪ್ರಕಾರ, ಯರಭಾಗ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ರೂ. 33 ಲಕ್ಷ 3,985 ಮೊತ್ತದ ಭ್ರಷ್ಟಾಚಾರ ನಡೆದಿದ್ದು, ಗ್ರಾಮ ಪಂಚಾಯತ್ ಅಧಿಕಾರಿ ಅಬ್ದುಲ್ ರಜಾಕ್ ಹಾಗೂ ಅಧ್ಯಕ್ಷೆ ಸುರೇಖಾ ಬಸವರಾಜ್ ಅವರು ಪರಸ್ಪರ ಸಂಚು ರೂಪಿಸಿ ಅಕ್ರಮ ನಡೆಸಿದ್ದಾರೆ ಎನ್ನಲಾಗಿದೆ. ತನಿಖೆಗೆ ಸ್ಪಷ್ಟ ಆದೇಶಗಳಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಪ್ರಸ್ತುತ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿ ಅಬ್ದುಲ್ ರಜಾಕ್ ಅವರು ಬಸವಕಲ್ಯಾಣ ತಾಲ್ಲೂಕಿನ ಮುಡುಬಿ ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಭೀಮರೆಡ್ಡಿ ಸಿಂಧನಕೇರಾ ಅವರು, ಲೋಕಾಯುಕ್ತದಿಂದ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಸರ್ಕಾರಕ್ಕೆ ಮೋಸ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅಕ್ರಮವಾಗಿ ದುರುಪಯೋಗಗೊಂಡ ಹಣವನ್ನು ಸರ್ಕಾರದ ಖಜಾನೆಗೆ ಮರಳಿ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.






