ಚಿಕ್ಕಮಗಳೂರು: ಮದ್ಯದ ವ್ಯಸನ ಒಬ್ಬ ವ್ಯಕ್ತಿಯನ್ನು ಯಾವ ಮಟ್ಟಕ್ಕೆ ಇಳಿಸಿಬಿಡುತ್ತದೆ ಎಂಬುದಕ್ಕೆ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ನಡೆದ ಘಟನೆ ದಾರುಣ ಉದಾಹರಣೆಯಾಗಿದೆ. ಮದ್ಯ ಸೇವನೆಯ ವಿಚಾರಕ್ಕೆ ಉಂಟಾದ ಗಲಾಟೆ ಅಂತ್ಯದಲ್ಲಿ ತಂದೆಯೇ ತನ್ನ ಮಗನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ರವಿವಾರ ನಡೆದಿದೆ.
ಇದನ್ನು ಓದಿ : ಬೆಂಗಳೂರಿಗೆ ಮತ್ತೊಂದು ಸಸ್ಯ ಕಾಶಿ: 153 ಎಕರೆ ವಿಸ್ತೀರ್ಣದ ವಿಶ್ವಗುರು ಬಸವಣ್ಣನವರ ಜೀವ ವೈವಿಧ್ಯ ಉದ್ಯಾನವನ
ಮೃತನನ್ನು ಪ್ರದೀಪ್ (40) ಎಂದು ಗುರುತಿಸಲಾಗಿದ್ದು, ಆರೋಪಿಯಾದ ತಂದೆ ರಮೇಶ್ ಆಚಾರ್ (65) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಅಪ್ಪ–ಮಗ ಇಬ್ಬರೂ ಮದ್ಯಪಾನಕ್ಕೆ ದಾಸರಾಗಿದ್ದರು. ಒಟ್ಟಿಗೆ ಕುಳಿತು ಮದ್ಯ ಸೇವಿಸುತ್ತಿದ್ದ ವೇಳೆ ‘ನನಗೆ ಕಡಿಮೆ, ನಿನಗೆ ಜಾಸ್ತಿ’ ಎಂಬ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ರೀತಿಯ ಗಲಾಟೆ ರವಿವಾರ ತೀವ್ರಗೊಂಡು, ಕುಡಿದ ಮತ್ತಿನಲ್ಲಿ ರಮೇಶ್ ತನ್ನ ಮಗ ಪ್ರದೀಪ್‌ನ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಪ್ರದೀಪ್ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಡೀ ರಾತ್ರಿ ಮೃತದೇಹ ಮನೆಯೊಳಗೆ ಬಿದ್ದಿದ್ದರೆ, ಬೆಳಿಗ್ಗೆ ರಮೇಶ್ ಮಗನ ಶವವನ್ನು ಮನೆಯ ಹೊರಗೆ ಎಳೆದು ತಂದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಬಾಳೂರು ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ರಮೇಶ್‌ರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮದ್ಯದ ವಿಚಾರಕ್ಕೆ ಮಗನನ್ನು ಕೊಲೆ ಮಾಡಿರುವುದಾಗಿ ರಮೇಶ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ಪ–ಮಗನ ನಿರಂತರ ಜಗಳದಿಂದ ಬೇಸತ್ತ ತಾಯಿ ಈ ಮೊದಲೇ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದ್ದು, ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು. ಈ ಘಟನೆ ಗ್ರಾಮದಲ್ಲಿ ತೀವ್ರ ಆಘಾತ ಮೂಡಿಸಿದೆ.






