ಸಿಗರೇಟ್‌ಗಳ ಮೇಲೆ ಕೇಂದ್ರ ಸರ್ಕಾರ ಹೊಸದಾಗಿ ವಿಧಿಸಿರುವ ಅಬಕಾರಿ ಸುಂಕದ ಪರಿಣಾಮವಾಗಿ ಐಟಿಸಿ ಕಂಪನಿಯ ಷೇರುಗಳಲ್ಲಿ ಭಾರೀ ಕುಸಿತ ಕಂಡುಬಂದಿದೆ. ಕೇವಲ ಎರಡು ವಹಿವಾಟು ದಿನಗಳಲ್ಲಿ ಷೇರುಗಳು ತೀವ್ರವಾಗಿ ಮಾರಾಟಕ್ಕೊಳಗಾಗಿ, ಎಲ್‌ಐಸಿ ಸೇರಿದಂತೆ ಹಲವು ದೊಡ್ಡ ಹೂಡಿಕೆದಾರರಿಗೆ ಭಾರೀ ಮಟ್ಟದ ಅನ್‌ರಿಯಲಿಸ್ಟಿಕ್ (ಕಾಲ್ಪನಿಕ) ನಷ್ಟವನ್ನುಂಟುಮಾಡಿದೆ.
ಇದನ್ನು ಓದಿ: ಷೇರು ಮಾರುಕಟ್ಟೆ ಕಲಿಯಲು ಓದಲೇಬೇಕಾದ 10 ಅತ್ಯುತ್ತಮ ಪುಸ್ತಕಗಳು 10 best books to read to learn the stock market.
ಜನವರಿ 2ರಂದು ಐಟಿಸಿ ಷೇರುಗಳು ಶೇ.5ರಷ್ಟು ಕುಸಿದು 52 ವಾರಗಳ ಕನಿಷ್ಠ ಮಟ್ಟವಾದ 345.25 ರೂ. ತಲುಪಿದರೂ, ದಿನದ ಅಂತ್ಯಕ್ಕೆ ಸ್ವಲ್ಪ ಚೇತರಿಸಿಕೊಂಡಿವೆ. 2026ರಲ್ಲಿ ಆರಂಭವಾದ ಮೊದಲ ಎರಡು ದಿನಗಳಲ್ಲೇ ಐಟಿಸಿ ಷೇರುಗಳು ಶೇ.14ಕ್ಕಿಂತ ಹೆಚ್ಚು ಕುಸಿತ ಕಂಡಿವೆ.
ಐಟಿಸಿಯ ಷೇರುದಾರರ ವಿವರಗಳನ್ನು ಪರಿಶೀಲಿಸಿದರೆ, ಕಂಪನಿಯಲ್ಲಿ ಯಾವುದೇ ಪ್ರಮೋಟರ್ ಪಾಲಿಲ್ಲದೆ ಶೇ.100ರಷ್ಟು ಷೇರುಗಳು ಸಾರ್ವಜನಿಕ ಹೂಡಿಕೆದಾರರ ಕೈಯಲ್ಲಿವೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶೇ.15.86ರಷ್ಟು ಪಾಲನ್ನು ಹೊಂದಿದ್ದರೆ, ಜನರಲ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಜಿಐಸಿ) ಶೇ.1.73 ಹಾಗೂ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಶೇ.1.4ರಷ್ಟು ಪಾಲನ್ನು ಹೊಂದಿವೆ. ಈ ಮೂರು ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆಗಳೇ ಐಟಿಸಿಯಲ್ಲಿ ಪ್ರಮುಖ ಹೂಡಿಕೆದಾರರಾಗಿವೆ.
ಐಟಿಸಿ ಷೇರುಗಳ ಭಾರೀ ಮಾರಾಟದಿಂದಾಗಿ ಎಲ್‌ಐಸಿಗೆ ಮಾತ್ರವೇ ಸುಮಾರು 11,468 ಕೋಟಿ ರೂಪಾಯಿ ಅನ್‌ರಿಯಲಿಸ್ಟಿಕ್ ನಷ್ಟ ಸಂಭವಿಸಿದೆ. ಡಿಸೆಂಬರ್ 31ರಂದು ಮಾರುಕಟ್ಟೆ ಮುಕ್ತಾಯದ ವೇಳೆಗೆ ಎಲ್‌ಐಸಿಯ ಐಟಿಸಿ ಹೂಡಿಕೆ ಮೌಲ್ಯ 80,028 ಕೋಟಿ ರೂ. ಆಗಿದ್ದರೆ, ಷೇರು ಬೆಲೆ ಕುಸಿತದ ಬಳಿಕ ಅದು 68,560 ಕೋಟಿ ರೂ.ಗೆ ಇಳಿದಿದೆ. ಇದೇ ಅವಧಿಯಲ್ಲಿ ಜಿಐಸಿಗೆ ಸುಮಾರು 1,254 ಕೋಟಿ ರೂ. ಹಾಗೂ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಗೆ 1,018 ಕೋಟಿ ರೂ.ಗಳಷ್ಟು ಕಾಲ್ಪನಿಕ ನಷ್ಟ ಉಂಟಾಗಿದೆ.
ಒಟ್ಟಾರೆ, ಐಟಿಸಿ ಷೇರುಗಳಲ್ಲಿ ಸಂಭವಿಸಿದ ತೀವ್ರ ಮಾರಾಟದಿಂದ ಸರ್ಕಾರಿ ಸ್ವಾಮ್ಯದ ಈ ಮೂರು ವಿಮಾ ಕಂಪನಿಗಳು ಕೇವಲ ಎರಡು ದಿನಗಳಲ್ಲಿ ಸುಮಾರು 13,740 ಕೋಟಿ ರೂಪಾಯಿ ನಷ್ಟ ಅನುಭವಿಸಿವೆ. ಆದರೆ ಇದು ಅನ್‌ರಿಯಲಿಸ್ಟಿಕ್ ನಷ್ಟವಾಗಿದ್ದು, ಷೇರುಗಳನ್ನು ವಾಸ್ತವವಾಗಿ ಮಾರಾಟ ಮಾಡಿದಾಗ ಮಾತ್ರ ಅದು ರಿಯಲಿಸ್ಟಿಕ್ ನಷ್ಟವಾಗಿ ಪರಿಗಣಿಸಲಾಗುತ್ತದೆ ಎಂಬುದು ಗಮನಾರ್ಹ.
ಜನವರಿ 2ರಂದು ಐಟಿಸಿ ಷೇರುಗಳು ದಿನದ ಅಂತ್ಯಕ್ಕೆ ಶೇ.4ರಷ್ಟು ಕುಸಿತದೊಂದಿಗೆ 350.10 ರೂ.ಗಳಲ್ಲಿ ವಹಿವಾಟು ಮುಕ್ತಾಯಗೊಂಡಿವೆ. ಕಳೆದ ಐದು ದಿನಗಳಲ್ಲಿ ಷೇರುಗಳು ಶೇ.13ಕ್ಕಿಂತ ಹೆಚ್ಚು ಹಾಗೂ ಕಳೆದ ಆರು ತಿಂಗಳಲ್ಲಿ ಶೇ.15ಕ್ಕಿಂತ ಹೆಚ್ಚು ಕುಸಿದಿವೆ. ಈ ಭಾರೀ ಕುಸಿತದಿಂದ ಕೇವಲ ಎರಡು ದಿನಗಳಲ್ಲಿ ಐಟಿಸಿ ಕಂಪನಿಯ ಮಾರುಕಟ್ಟೆ ಮೌಲ್ಯವು ಸುಮಾರು 72 ಸಾವಿರ ಕೋಟಿ ರೂ. ಇಳಿಕೆಯಾಗಿದ್ದು, ಪ್ರಸ್ತುತ ಕಂಪನಿಯ ಮೌಲ್ಯ 4,38,639 ಕೋಟಿ ರೂಪಾಯಿ ಮಟ್ಟದಲ್ಲಿದೆ.
ಇನ್ನೊಂದೆಡೆ, ಐಟಿಸಿ ಷೇರುಗಳ ಕುಸಿತದ ನಡುವೆಯೂ ಎಲ್‌ಐಸಿ ಷೇರುಗಳು ಶೇ.1ರಷ್ಟು ಏರಿಕೆ ಕಂಡು ತಲಾ 861 ರೂ.ಗಳಲ್ಲಿ ವಹಿವಾಟು ಅಂತ್ಯಗೊಂಡಿವೆ. ಜನರಲ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಷೇರುಗಳು ಕೂಡ ಅಲ್ಪ ಲಾಭದೊಂದಿಗೆ 380 ರೂ. ಮಟ್ಟದಲ್ಲಿ ಮುಕ್ತಾಯಗೊಂಡಿವೆ.






