ಭೋಪಾಲ್: ಮಗು ಕುಡಿಯುತ್ತಿದ್ದ ಹಾಲಿಗೆ ಬೆರೆಸಿದ ಕಲುಷಿತ ನಲ್ಲಿ ನೀರು ವಿಷವಾಗಿ ಪರಿಣಮಿಸಿ ಐದೂವರೆ ತಿಂಗಳ ಗಂಡು ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಮೃತ ಮಗುವನ್ನು ಅಯಾನ್ ಎಂದು ಗುರುತಿಸಲಾಗಿದೆ.
ಅಯಾನ್ ಅವರ ತಂದೆ ಸುನಿಲ್ ಸಾಹು ಖಾಸಗಿ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮದುವೆಯಾಗಿ 10 ವರ್ಷಗಳ ನಂತರ ಜುಲೈ ತಿಂಗಳಲ್ಲಿ ಅವರಿಗೆ ಮಗು ಜನಿಸಿತ್ತು. ವರ್ಷಗಳ ಪ್ರಾರ್ಥನೆ ಮತ್ತು ನಿರೀಕ್ಷೆಯ ಬಳಿಕ ಮನೆಗೆ ಸಂತೋಷ ತಂದಿದ್ದ ಕಂದಮ್ಮ, ಕೇವಲ ಐದು ತಿಂಗಳಲ್ಲೇ ಕಣ್ಣು ಮುಚ್ಚಿದೆ.
ಮಗುವಿನ ತಾಯಿಗೆ ಎದೆಹಾಲು ಸಮರ್ಪಕವಾಗಿ ಬರದ ಕಾರಣ ವೈದ್ಯರ ಸಲಹೆ ಮೇರೆಗೆ ಪ್ಯಾಕೆಟ್ ಹಾಲು ನೀಡಲಾಗುತ್ತಿತ್ತು. ಈ ಹಾಲಿಗೆ ಮನೆಯಲ್ಲೇ ಬಳಸುತ್ತಿದ್ದ ನಲ್ಲಿ ನೀರನ್ನೇ ಬೆರೆಸಿ ಮಗುವಿಗೆ ಕುಡಿಸಲಾಗುತ್ತಿತ್ತು. ಆದರೆ ಆ ನೀರು ಕಲುಷಿತಗೊಂಡಿದ್ದ ಕಾರಣ ಮಗು ಗಂಭೀರವಾಗಿ ಅಸ್ವಸ್ಥಗೊಂಡಿದೆ ಎನ್ನಲಾಗಿದೆ.
ಮಗು ಸಂಪೂರ್ಣ ಆರೋಗ್ಯವಾಗಿತ್ತು. ಯಾವುದೇ ಸಮಸ್ಯೆಗಳಿರಲಿಲ್ಲ. ಆದರೆ ಎರಡು ದಿನಗಳ ಹಿಂದೆ ಜ್ವರ ಮತ್ತು ಭೇದಿಯ ಲಕ್ಷಣಗಳು ಕಾಣಿಸಿಕೊಂಡವು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಔಷಧ ನೀಡಿದ್ದರು. ಆದರೂ ಆರೋಗ್ಯದಲ್ಲಿ ಸುಧಾರಣೆ ಕಾಣಿಸಲಿಲ್ಲ. ಭಾನುವಾರ ರಾತ್ರಿ ಮಗುವಿನ ಸ್ಥಿತಿ ಮತ್ತಷ್ಟು ಗಂಭೀರಗೊಂಡಿದ್ದು, ಸೋಮವಾರ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಮಗು ಮೃತಪಟ್ಟಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಗುವಿನ ಸಾವಿಗೆ ಕಲುಷಿತ ನೀರೇ ಕಾರಣ ಎಂದು ಆರೋಪಿಸಿರುವ ಸುನಿಲ್ ಸಾಹು, ನೀರು ಕಲುಷಿತಗೊಂಡಿರುವ ಬಗ್ಗೆ ಯಾವುದೇ ಅಧಿಕಾರಿಗಳಿಂದ ಮಾಹಿತಿ ನೀಡಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೆರೆಹೊರೆಯವರೂ ಇದೇ ನೀರನ್ನು ಬಳಸುತ್ತಿದ್ದು, ಯಾವುದೇ ಎಚ್ಚರಿಕೆ ನೀಡಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಈ ದುರ್ಘಟನೆಯ ಬಗ್ಗೆ ಕುಟುಂಬವು ಯಾರ ಮೇಲೂ ದೂರು ದಾಖಲಿಸುವ ಉದ್ದೇಶವಿಲ್ಲ ಎಂದು ತಿಳಿಸಿದ್ದು, “10 ವರ್ಷಗಳ ನಂತರ ದೇವರು ನಮಗೆ ಸಂತೋಷ ನೀಡಿದ್ದ. ಈಗ ಅದನ್ನೇ ಹಿಂಪಡೆದಿದ್ದಾನೆ” ಎಂದು ಸುನಿಲ್ ಅವರ ತಾಯಿ ನೋವಿನಿಂದ ಹೇಳಿದ್ದಾರೆ.






