ಬಳ್ಳಾರಿ (ಜ.01): ಮಾಜಿ ಸಚಿವ ಜನಾರ್ಧನ ರೆಡ್ಡಿ ಹಾಗೂ ಕಾಂಗ್ರೆಸ್ ನಾಯಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ನಡೆದ ಕಲ್ಲುತೂರಾಟ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಭರತ್ ರೆಡ್ಡಿ ಬೆಂಬಲಿಗರು ತಮ್ಮ ಮನೆ ಮುಂದೆ ಕಲ್ಲುತೂರಾಟ ನಡೆಸಿದ್ದು ಮಾತ್ರವಲ್ಲ, ತನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ.
ಇದನ್ನು ಓದಿ: ಹಾಸ್ಟೆಲ್ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ 9ನೇ ತರಗತಿಯ ವಿದ್ಯಾರ್ಥಿನಿ
ಕಲ್ಲುತೂರಾಟದ ವೇಳೆ ಗುಂಡಿನ ದಾಳಿಯೂ ನಡೆದಿದ್ದು, ಭರತ್ ರೆಡ್ಡಿ ಬೆಂಬಲಿಗರು ಗುಂಡು ಹಾರಿಸಿದ್ದಾರೆ ಎಂದು ಜನಾರ್ಧನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಬುಲೆಟ್‌ನ್ನು ತೋರಿಸಿ ಮಾತನಾಡಿದ ಅವರು, ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರ ಗನ್‌ಮ್ಯಾನ್ ಫೈರಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬ್ಯಾನರ್ ವಿಚಾರದ ನೆಪದಲ್ಲಿ ತನ್ನ ಮೇಲೆ ಹತ್ಯಾ ಯತ್ನ ನಡೆದಿದೆ ಎಂದು ಆರೋಪಿಸಿದ ಜನಾರ್ಧನ ರೆಡ್ಡಿ, ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿ ರೌಡಿಗಳನ್ನು ಕರೆದುಕೊಂಡು ಬಂದು ದೌರ್ಜನ್ಯ ನಡೆಸಿದ್ದಾರೆ ಎಂದಿದ್ದಾರೆ. ಈ ವಿಚಾರವನ್ನು ಪ್ರಶ್ನಿಸಿದ ಶ್ರೀರಾಮುಲು ಮೇಲೆ ಗಲಾಟೆ ಮಾಡಲು ಮುಂದಾದರು ಎಂದು ಅವರು ದೂರಿದ್ದಾರೆ.
ರಾಜಕೀಯ ದ್ವೇಷದ ಜೊತೆಗೆ ವೈಯಕ್ತಿಕ ದ್ವೇಷವನ್ನು ತೋರಿಸುತ್ತಿರುವ ಭರತ್ ರೆಡ್ಡಿ ಹೇಡಿತನದ ರಾಜಕೀಯ ಮಾಡುತ್ತಿದ್ದಾರೆ ಎಂದು ಜನಾರ್ಧನ ರೆಡ್ಡಿ ಕಿಡಿಕಾರಿದ್ದಾರೆ. ಶಾಸಕರಿಗೆ ಕನಿಷ್ಠ ಭದ್ರತೆಯನ್ನೂ ಒದಗಿಸದ ಕಾಂಗ್ರೆಸ್ ಸರ್ಕಾರ ಹಲ್ಲೆ ಹಾಗೂ ಕೊಲೆ ಯತ್ನಕ್ಕೆ ಅವಕಾಶ ಮಾಡಿಕೊಡುತ್ತಿದೆ ಎಂದು ಆರೋಪಿಸಿದ್ದಾರೆ.
ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಲು ಯತ್ನಿಸಿದ್ದಾರೆ. ಭರತ್ ರೆಡ್ಡಿ ಬೆಂಬಲಿಗರು ಬಡಿಗೆ ಹಿಡಿದು ಬರುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಮನೆ ಮುಂದೆ ಭಾರಿ ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದ್ದಾರೆ. ಪರಿಸ್ಥಿತಿ ಕೈಮೀರುವ ಸಾಧ್ಯತೆ ಕಂಡು ಪೊಲೀಸರು ಹೆಚ್ಚುವರಿ ಬಲವನ್ನು ನಿಯೋಜಿಸಿದ್ದಾರೆ.






