ಫರಿದಾಬಾದ್ (ಹರಿಯಾಣ): ಡ್ರಾಪ್ ನೀಡುವುದಾಗಿ ನಂಬಿಸಿ ಕಾರಿನಲ್ಲಿ ಕೂರಿಸಿಕೊಂಡ ದುರುಳರಿಬ್ಬರು 25 ವರ್ಷದ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ 90 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿದ್ದ ಕಾರಿನಿಂದ ಆಕೆಯನ್ನು ರಸ್ತೆಬದಿಗೆ ತಳ್ಳಿಹೋದ ಭೀಕರ ಘಟನೆ ಡಿಸೆಂಬರ್ 29ರ ರಾತ್ರಿ ಫರಿದಾಬಾದ್‌ನಲ್ಲಿ ನಡೆದಿದೆ.
ಇದನ್ನು ಓದಿ: ಮದುವೆಯಾಗಿ 13 ತಿಂಗಳಲ್ಲೇ ವಿಚ್ಛೇದನ: ಪತ್ನಿಗೆ ತಿಂಗಳಿಗೆ ₹5 ಲಕ್ಷ ಜೀವನಾಂಶ ನೀಡಲು ಪತಿಗೆ ಕೋರ್ಟ್ ಆದೇಶ
ಕಾರಿನಿಂದ ಬಿದ್ದ ಪರಿಣಾಮ ಮಹಿಳೆಯ ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿದ್ದು, 12ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಸೋಮವಾರ ಸಂಜೆ ಸ್ನೇಹಿತರ ಮನೆಗೆ ತೆರಳಿದ್ದ ಮಹಿಳೆ, ತಡರಾತ್ರಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ಅಲ್ಲಿಗೆ ಬಂದ ಆರೋಪಿಗಳು ಮನೆಗೆ ಡ್ರಾಪ್ ನೀಡುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ಆದರೆ ಗಮ್ಯಸ್ಥಾನದ ಬದಲು ಆಕೆಯನ್ನು ಗುರುಗ್ರಾಮ್ ಕಡೆಗೆ ಕರೆದೊಯ್ದು, ಕಾರಿನೊಳಗೇ ಇಬ್ಬರೂ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ನಸುಕಿನಜಾವ ಸುಮಾರು 3 ಗಂಟೆ ವೇಳೆಗೆ ರಾಜಾ ಚೌಕ್ ಬಳಿ, ಅತಿ ವೇಗದಲ್ಲಿ ಚಲಿಸುತ್ತಿದ್ದ ಕಾರಿನಿಂದ ಮಹಿಳೆಯನ್ನು ಹೊರಗೆಸೆದಿದ್ದಾರೆ. ರಸ್ತೆ ಮೇಲೆ ಬಿದ್ದ ರಭಸಕ್ಕೆ ಆಕೆಗೆ ತೀವ್ರ ಗಾಯಗಳಾಗಿವೆ.
ಸಹೋದರಿಯ ಹೇಳಿಕೆ:
ಸಂತ್ರಸ್ತೆಯ ಸಹೋದರಿ ನೀಡಿದ ದೂರಿನ ಪ್ರಕಾರ, ವೈವಾಹಿಕ ಭಿನ್ನಾಭಿಪ್ರಾಯದ ಹಿನ್ನೆಲೆ ಮಹಿಳೆ ಪೋಷಕರೊಂದಿಗೆ ವಾಸಿಸುತ್ತಿದ್ದರು. ಘಟನೆ ನಡೆದ ರಾತ್ರಿ ಮಹಿಳೆ ಮಧ್ಯರಾತ್ರಿ ಸಹೋದರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ತಕ್ಷಣ ಸ್ಥಳಕ್ಕೆ ತೆರಳಿ ಬಾದ್‌ಶಾ ಖಾನ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಗಂಭೀರ ಸ್ಥಿತಿಯನ್ನು ಗಮನಿಸಿ ದೆಹಲಿಗೆ ರವಾನೆ ಮಾಡಲು ವೈದ್ಯರು ಶಿಫಾರಸು ಮಾಡಿದ್ದರು. ಬಳಿಕ ಫರಿದಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳ ಬಂಧನ:
ಸಹೋದರಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಮೂಲದವರಾಗಿದ್ದು, ಪ್ರಸ್ತುತ ಫರಿದಾಬಾದ್‌ನಲ್ಲಿ ವಾಸಿಸುತ್ತಿದ್ದರು. ಮಹಿಳೆಯೊಂದಿಗೆ ಅವರಿಗೆ ಯಾವುದೇ ಪೂರ್ವ ಪರಿಚಯ ಇರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಮುಂದಿನ ವಿಚಾರಣೆ ನಡೆಯುತ್ತಿದ್ದು, ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಫರಿದಾಬಾದ್ ಪೊಲೀಸ್ ಅಧಿಕಾರಿ ಯಶ್ಪಾಲ್ ಯಾದವ್ ತಿಳಿಸಿದ್ದಾರೆ.






