ಹೈದರಾಬಾದ್: ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಜಡ್ಚೆರ್ಲಾ ಮಂಡಲದಲ್ಲಿ ನಡೆದ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ. ಓದುವ ವಯಸ್ಸಿನಲ್ಲಿದ್ದ ಇಬ್ಬರು ಅಪ್ರಾಪ್ತರು ಪ್ರೇಮದ ಆಕರ್ಷಣೆಗೆ ಒಳಗಾಗಿ ತೆಗೆದುಕೊಂಡ ನಿರ್ಧಾರ ಇದೀಗ ಕಾನೂನು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ.
ಪೊಲೀಸರು ನೀಡಿರುವ ಮಾಹಿತಿಯಂತೆ, ಜಡ್ಚೆರ್ಲಾ ಮಂಡಲದ ತಾಂಡವೊಂದರ ನಿವಾಸಿಯಾದ 17 ವರ್ಷದ ಬಾಲಕಿ ಇಂಟರ್ ಮೊದಲ ವರ್ಷದ ವಿದ್ಯಾರ್ಥಿನಿಯಾಗಿದ್ದು, ಅದೇ ಗ್ರಾಮದ 15 ವರ್ಷದ ಬಾಲಕ 9ನೇ ತರಗತಿಯಲ್ಲಿ ಓದುತ್ತಿದ್ದ. ಕೆಲ ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಮದುವೆಯಾಗುವ ಕನಸನ್ನೂ ಕಟ್ಟಿಕೊಂಡಿದ್ದರು ಎನ್ನಲಾಗಿದೆ.
ಈ ನಡುವೆ ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿದ್ದು, ಪರಿಣಾಮ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಈ ವಿಚಾರ ಮನೆಗೆ ಗೊತ್ತಾದರೆ ಏನಾಗಬಹುದು ಎಂಬ ಭಯದಿಂದ ಇಬ್ಬರೂ ಮನೆಯಿಂದ ಪರಾರಿಯಾಗಿದ್ದರು. ಮಕ್ಕಳು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ಜಡ್ಚೆರ್ಲಾ ಪೊಲೀಸರಿಗೆ ದೂರು ದಾಖಲಿಸಿದ್ದರು.
ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು, ಡಿಸೆಂಬರ್ 30ರಂದು ಕೊಯಿಲಕೊಂಡ ಪ್ರದೇಶದಲ್ಲಿ ಇಬ್ಬರು ಇರುವುದನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಬಾಲಕಿ ಅಪ್ರಾಪ್ತೆಯಾಗಿದ್ದು, ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಇಬ್ಬರನ್ನೂ ಜುವೆನೈಲ್ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.
ಈ ಘಟನೆ ಪೋಷಕರು ತಮ್ಮ ಮಕ್ಕಳ ನಡೆ-ನುಡಿಗಳ ಮೇಲೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂಬುದಕ್ಕೆ ಮತ್ತೊಮ್ಮೆ ಎಚ್ಚರಿಕೆಯಾಗಿ ಪರಿಣಮಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.







2 thoughts on “17 ವರ್ಷದ ಅಪ್ರಾಪ್ತ ಬಾಲಕಿ ಗರ್ಭಿಣಿ: 9ನೇ ತರಗತಿ ವಿದ್ಯಾರ್ಥಿಯಿಂದ ಕೃತ್ಯ…!”
Comments are closed.