ಮದ್ಯದ ನಶೆಯಲ್ಲಿ ತಾಯಿಯೊಂದಿಗೆ ತಮಾಷೆ ಮಾಡಲು ಹೋಗಿ ಯುವಕನೊಬ್ಬ ಅಕಸ್ಮಿಕವಾಗಿ ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರೋಹಿತ್ ನಗರದಲ್ಲಿ ನಡೆದಿದೆ.
ಮೃತ ಯುವಕನನ್ನು ವಿಜಯಕುಮಾರ್ (28) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ ವಿಜಯಕುಮಾರ್ ನಿನ್ನೆ ಸಂಜೆ ಮದ್ಯ ಸೇವಿಸಿ ಮನೆಗೆ ಬಂದಿದ್ದು, ತಾಯಿಯ ಬಳಿ ಖರ್ಚಿಗೆ ಹಣ ನೀಡುವಂತೆ ಕೇಳಿದ್ದಾನೆ. ಇದಕ್ಕೆ ತಾಯಿ ನಿರಾಕರಿಸಿದ್ದಕ್ಕೆ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ತಾಯಿಯನ್ನು ಹೆದರಿಸುವ ಉದ್ದೇಶದಿಂದ ತಮಾಷೆಗೆ ನೇಣು ಹಾಕಿಕೊಳ್ಳುವಂತೆ ನಟಿಸಲು ಹೋಗಿದ್ದ ವಿಜಯಕುಮಾರ್, ನೇಣಿನ ಕುಣಿಕೆಗೆ ಸಿಲುಕಿ ಅಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ. ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ಮೃತ ವಿಜಯಕುಮಾರ್ ಈ ಹಿಂದೆಯೂ ಇದೇ ರೀತಿ ಕುಟುಂಬಸ್ಥರ ಜೊತೆ ತಮಾಷೆ ಮಾಡುತ್ತಿದ್ದನೆಂದು ಹೇಳಲಾಗಿದೆ. ಸಾವಿನ ವಿಚಾರದಲ್ಲಿ ತಮಾಷೆ ಮಾಡಬೇಡ ಎಂದು ತಾಯಿ ಹಲವು ಬಾರಿ ಬುದ್ಧಿ ಹೇಳಿದ್ದರೂ ಆತ ತನ್ನ ಚಾಳಿಯನ್ನು ಮುಂದುವರಿಸಿದ್ದಾನೆ ಎಂದು ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ.
ಮಗನ ಮದುವೆ ಬಗ್ಗೆ ಕನಸು ಕಂಡಿದ್ದ ತಾಯಿ, ಈ ಅಕಾಲಿಕ ಸಾವಿನಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದು, ಕುಟುಂಬದಲ್ಲಿ ಶೋಕದ ವಾತಾವರಣ ಮನೆಮಾಡಿದೆ.






