---Advertisement---

ಯುವಕನ ಕಿರುಕುಳಕ್ಕೆ ಬೇಸತ್ತು ಮಗನೊಂದಿಗೆ ಕೆರೆಗೆ ಹಾರಿ 2 ಮಕ್ಕಳ ತಾಯಿ ಆತ್ಮಹತ್ಯೆ

On: December 31, 2025 8:18 AM
Follow Us:
---Advertisement---

ತುಮಕೂರು: ಕೆಲಸದ ನೆಪದಲ್ಲಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಯುವಕನ ವರ್ತನೆಗೆ ಬೇಸತ್ತು, ಎಂಟು ವರ್ಷದ ಮಗನೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತುಮಕೂರು ತಾಲೂಕಿನ ಸೋರೆಕುಂಟೆ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಹಂಸರೇಖ ಎಂದು ಗುರುತಿಸಲಾಗಿದೆ. ಹಂಸರೇಖ ಅವರ ಪತಿ ನಾಗೇಶ್ ನಾಲ್ಕು–ಐದು ವರ್ಷಗಳ ಹಿಂದೆ ನಿಧನರಾಗಿದ್ದರು. ಆಗಲೇ ಇಬ್ಬರು ಮಕ್ಕಳ ತಾಯಿಯಾಗಿದ್ದ ಹಂಸರೇಖ ಅವರ ಭವಿಷ್ಯ ಹಾಳಾಗಬಾರದು ಎಂಬ ಉದ್ದೇಶದಿಂದ ಕುಟುಂಬಸ್ಥರು ಪತಿಯ ಸಹೋದರನೊಂದಿಗೆ ಮರುವಿವಾಹ ಮಾಡಿಸಿದ್ದರು. ಬಳಿಕ ಜೀವನೋಪಾಯಕ್ಕಾಗಿ ವಸಂತನರಸಾಪುರದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.

ಕಂಪನಿಯಲ್ಲಿ ಕೆಲಸ ಮಾಡುವ ವೇಳೆ ಹಂಸರೇಖ ಅವರಿಗೆ ಯುವಕನೊಬ್ಬ ಪರಿಚಯವಾಗಿದ್ದು, ಆ ಪರಿಚಯ ಸ್ನೇಹವಾಗಿ ಮುಂದುವರಿದು ಆತ್ಮೀಯತೆಯ ಹಂತಕ್ಕೆ ತಲುಪಿತ್ತು ಎನ್ನಲಾಗಿದೆ. ಆದರೆ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಮನಸ್ತಾಪ ಉಂಟಾದ ಬಳಿಕ ಹಂಸರೇಖ ಆ ಯುವಕನನ್ನು ದೂರವಿಟ್ಟಿದ್ದರು. ಇದರಿಂದ ಕೋಪಗೊಂಡ ಯುವಕ, ಹಂಸರೇಖ ಅವರೊಂದಿಗೆ ನಡೆದಿದ್ದ ಫೋನ್ ಸಂಭಾಷಣೆಯ ಆಡಿಯೋಗಳನ್ನು ಆಕೆಯ ಸಂಬಂಧಿಕರಿಗೆ ಕಳುಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ವಿಚಾರ ತಿಳಿದ ಹಂಸರೇಖ ಅವರ ಅಣ್ಣ ಯುವಕನಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದರು. ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿಹೋದ ಹಂಸರೇಖ ತೀವ್ರ ನಿರಾಶೆಗೆ ಒಳಗಾಗಿ ತನ್ನ ಎಂಟು ವರ್ಷದ ಪುತ್ರ ಗುರುವನ್ನೊಂದಿಗೆ ಕಳ್ಳೆಂಬಳ್ಳ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆಯ ದಿನ ಹಂಸರೇಖ ಇಬ್ಬರೂ ಮಕ್ಕಳನ್ನೂ ಕರೆದುಕೊಂಡು ಕೆರೆಗೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ “ನಾವು ಸಾಯೋಣ” ಎಂದು ಹೇಳಿದ್ದರಿಂದ ಭಯಗೊಂಡ ಹಿರಿಯ ಮಗ ತಕ್ಷಣ ಕಳ್ಳೆಂಬಳ್ಳ ಬಸ್‌ಸ್ಟಾಂಡ್‌ಗೆ ಓಡಿ ಹೋಗಿ ಅತ್ತೆ ಯಶೋಧ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಆದರೆ ಕುಟುಂಬಸ್ಥರು ಸ್ಥಳಕ್ಕೆ ತಲುಪುವಷ್ಟರಲ್ಲಿ ಹಂಸರೇಖ ದುಡುಕಿನ ನಿರ್ಧಾರ ಕೈಗೊಂಡಿದ್ದರು.

ಈ ದಾರುಣ ಘಟನೆಯಲ್ಲಿ ತಾಯಿ ಮತ್ತು ಒಬ್ಬ ಮಗ ಪ್ರಾಣ ಕಳೆದುಕೊಂಡಿದ್ದು, ಮತ್ತೊಬ್ಬ ಮಗ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥನಾಗಿದ್ದಾನೆ. ಪ್ರಕರಣಕ್ಕೆ ಕಾರಣ ಎನ್ನಲಾಗಿರುವ ಯುವಕ ಇನ್ನೂ ಪತ್ತೆಯಾಗಿಲ್ಲ. ಆತನ ಮೊಬೈಲ್ ಸಂಖ್ಯೆ ಹೊರತುಪಡಿಸಿ ಹೆಚ್ಚಿನ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಯುವಕನ ಬಂಧನಕ್ಕಾಗಿ ಶೋಧ ಕಾರ್ಯ ಆರಂಭಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Join WhatsApp

Join Now

RELATED POSTS

2 thoughts on “ಯುವಕನ ಕಿರುಕುಳಕ್ಕೆ ಬೇಸತ್ತು ಮಗನೊಂದಿಗೆ ಕೆರೆಗೆ ಹಾರಿ 2 ಮಕ್ಕಳ ತಾಯಿ ಆತ್ಮಹತ್ಯೆ”

Comments are closed.