---Advertisement---

ಬಯೋಕಾನ್ ಆವರಣದಲ್ಲಿ ದುರಂತ: ಆರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು 26 ವರ್ಷದ ಯುವ ಟೆಕ್ಕಿ ಸ್ಥಳದಲ್ಲೇ ಸಾವು!!

On: December 30, 2025 7:32 PM
Follow Us:
---Advertisement---

ಸಿಲಿಕಾನ್ ಸಿಟಿ ಬೆಂಗಳೂರಿನ ಹೆಸರುವಾಸಿ ಸಂಸ್ಥೆಯಾದ ಬಯೋಕಾನ್ ಕಂಪನಿ ಆವರಣದಲ್ಲಿ ಮನಕಲಕುವ ಘಟನೆ ಸಂಭವಿಸಿದೆ. ಕಂಪನಿಯ ಆರನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದ 26 ವರ್ಷದ ಯುವ ಸಾಫ್ಟ್‌ವೇರ್ ಇಂಜಿನಿಯರ್ ಸ್ಥಳದಲ್ಲೇ ಮೃತಪಟ್ಟಿರುವುದು ಉದ್ಯೋಗಿಗಳಲ್ಲಿ ಆಘಾತ ಮೂಡಿಸಿದೆ.

ಮೃತ ಯುವಕನನ್ನು ಬನಶಂಕರಿ ನಿವಾಸಿ ಅನಂತಕುಮಾರ್ (26) ಎಂದು ಗುರುತಿಸಲಾಗಿದ್ದು, ಅವರು ಬಯೋಕಾನ್‌ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಮಧ್ಯಾಹ್ನ ಕಂಪನಿಯ ಕೆಫೆಟೇರಿಯಾ ಸಮೀಪದ ಬಾಲ್ಕನಿಯಲ್ಲಿ ನಿಂತು ತಮ್ಮ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಅಚಾನಕ್ ನಿಯಂತ್ರಣ ತಪ್ಪಿ ಆರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಅತ್ಯಂತ ಎತ್ತರದಿಂದ ಬಿದ್ದ ಪರಿಣಾಮ ಅನಂತಕುಮಾರ್ ಅವರ ತಲೆ ಹಾಗೂ ದೇಹಕ್ಕೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಕೂಡಲೇ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಸಹಾಯಕ್ಕೆ ಧಾವಿಸಿದರೂ, ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ದೃಶ್ಯವನ್ನು ಕಂಡ ಸಹೋದ್ಯೋಗಿಗಳು ಬೆಚ್ಚಿಬಿದ್ದಿದ್ದಾರೆ.

ಘಟನೆಯ ಸಮಯದಲ್ಲಿ ಅನಂತಕುಮಾರ್ ತಮ್ಮ ಗೆಳತಿಯೊಂದಿಗೆ ಮಾತನಾಡುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಮಹತ್ವ ಪಡೆದುಕೊಂಡಿದೆ. ಅವರು ಕಾಲು ಜಾರಿ ಬಿದ್ದರೋ ಅಥವಾ ಈ ಸಾವಿನ ಹಿಂದೆ ಬೇರೆ ಕಾರಣಗಳಿದೆಯೋ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಯಾಗಿರುವ ಗೆಳತಿಯ ಹೇಳಿಕೆ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ. ಪ್ರತಿಷ್ಠಿತ ಕಂಪನಿಯೊಳಗೇ ಇಂತಹ ದುರಂತ ನಡೆದಿರುವುದು ಟೆಕ್ಕಿಗಳ ವಲಯದಲ್ಲಿ ಆತಂಕ ಹಾಗೂ ದುಃಖಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಯೋಕಾನ್ ಸಂಸ್ಥೆ, ನಮ್ಮ ಉದ್ಯೋಗಿಯೊಬ್ಬರು ನಿಧನರಾದ ಸುದ್ದಿ ನಮಗೆ ತೀವ್ರ ದುಃಖ ತಂದಿದೆ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ನಾವು ಇದ್ದೇವೆ ಎಂದು ತಿಳಿಸಿದ್ದು, ಪ್ರಕರಣ ಪೊಲೀಸ್ ತನಿಖೆಯಲ್ಲಿರುವುದರಿಂದ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment