---Advertisement---

ಹೆಂಡತಿಯ ಅನುಮತಿ ಇಲ್ಲದೆ ಮದ್ಯಪಾನ ಮಾಡಿದರೆ ಜೈಲಾ? ವೈರಲ್ ಸುದ್ದಿಯ ಸತ್ಯವೇನು?

On: December 30, 2025 1:42 PM
Follow Us:
---Advertisement---

ನವದೆಹಲಿ: 2026ರ ಹೊಸ ವರ್ಷವನ್ನು ಸ್ವಾಗತಿಸಲು ದೇಶದಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತಿರುವ ನಡುವೆ, ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಚಿತ್ರ ‘ಕಾನೂನು’ ಕುರಿತು ಸುದ್ದಿಗಳು ವೈರಲ್ ಆಗುತ್ತಿವೆ. ವಿಶೇಷವಾಗಿ ಮದ್ಯಪಾನ ಮಾಡುವ ಗಂಡಂದಿರಲ್ಲಿ ಈ ಸುದ್ದಿ ಚರ್ಚೆಗೆ ಕಾರಣವಾಗಿದೆ.

ವೈರಲ್ ಆಗಿರುವ ಪೋಸ್ಟ್‌ಗಳು ಮತ್ತು ವೀಡಿಯೊಗಳ ಪ್ರಕಾರ, ಪತ್ನಿಯ ಅನುಮತಿ ಇಲ್ಲದೆ ಪತಿ ಮದ್ಯಪಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಹೇಳಿಕೆಗಳು ಹರಡಿವೆ. ಆದರೆ ಈ ಹೇಳಿಕೆ ಸಂಪೂರ್ಣ ಸತ್ಯವಲ್ಲ ಎಂದು ಕಾನೂನು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಈ ವಿಚಾರವನ್ನು ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 85ಕ್ಕೆ ಲಿಂಕ್ ಮಾಡಲಾಗುತ್ತಿದೆ. ಈ ಸೆಕ್ಷನ್ ಹಳೆಯ IPC ಸೆಕ್ಷನ್ 498Aನ ನವೀಕರಿಸಿದ ರೂಪವಾಗಿದ್ದು, ಜುಲೈ 1, 2024ರಿಂದ ಜಾರಿಗೆ ಬಂದಿದೆ.

ಈ ಕಾನೂನಿನ ಪ್ರಕಾರ, ಪತಿ ಮದ್ಯ ಅಥವಾ ಯಾವುದೇ ಮಾದಕ ವಸ್ತುವಿನ ಪ್ರಭಾವದಲ್ಲಿದ್ದು, ತನ್ನ ಹೆಂಡತಿಗೆ ದೈಹಿಕ ಅಥವಾ ಮಾನಸಿಕ ಕ್ರೌರ್ಯ ಎಸಗಿದರೆ, ಮನೆಯಲ್ಲಿ ಅವ್ಯವಸ್ಥೆ ಉಂಟುಮಾಡಿದರೆ, ಆಕೆಯ ಸುರಕ್ಷತೆ, ಮಾನಸಿಕ ಶಾಂತಿ ಅಥವಾ ಗೌರವಕ್ಕೆ ಧಕ್ಕೆಯುಂಟು ಮಾಡಿದರೆ, ಹೆಂಡತಿಗೆ ಪತಿಯ ವಿರುದ್ಧ FIR ದಾಖಲಿಸುವ ಹಕ್ಕು ಇದೆ. ಈ ಅಪರಾಧಕ್ಕೆ ದಂಡದ ಜೊತೆಗೆ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಬಹುದು.

ಆದರೆ, ಕೇವಲ ಮದ್ಯಪಾನ ಮಾಡಿದ್ದಕ್ಕೆ ಮಾತ್ರ ಜೈಲು ಶಿಕ್ಷೆ ವಿಧಿಸಲಾಗುವುದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯವನ್ನು “ಹೆಂಡತಿಯ ಅನುಮತಿಯಿಲ್ಲದೆ ಕುಡಿದರೆ ಜೈಲು” ಎಂದು ಸರಳೀಕರಿಸಿ ತಪ್ಪಾಗಿ ಪ್ರಚಾರ ಮಾಡಲಾಗುತ್ತಿದೆ.

ಉದಾಹರಣೆಗೆ, ಪತಿ ಮದ್ಯಪಾನ ಮಾಡಿ ಮನೆಗೆ ಬಂದು ಜಗಳ, ಕಿರುಕುಳ ಅಥವಾ ಹಿಂಸಾಚಾರ ನಡೆಸುತ್ತಿದ್ದರೆ, ಅಥವಾ ಹೆಂಡತಿ ಸ್ಪಷ್ಟವಾಗಿ ವಿರೋಧಿಸಿದ್ದರೂ ಆತನ ವರ್ತನೆಯಿಂದ ಅವಳಿಗೆ ಮಾನಸಿಕ ಅಥವಾ ದೈಹಿಕ ಹಾನಿಯಾಗುತ್ತಿದ್ದರೆ, ಅಂಥ ಸಂದರ್ಭಗಳಲ್ಲಿ ಈ ಕಾನೂನು ಅನ್ವಯವಾಗಬಹುದು.

ಸರ್ಕಾರದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿನ ಕೌಟುಂಬಿಕ ಹಿಂಸಾಚಾರ ಪ್ರಕರಣಗಳಲ್ಲಿ ಶೇಕಡಾ 40ಕ್ಕೂ ಹೆಚ್ಚು ಪ್ರಕರಣಗಳಿಗೆ ಮದ್ಯಪಾನ ಕಾರಣವಾಗಿದೆ. ಈ ಹಿನ್ನೆಲೆದಲ್ಲಿ ಮಹಿಳೆಯರಿಗೆ ಬಲವಾದ ಕಾನೂನು ರಕ್ಷಣೆ ನೀಡುವುದು ಈ ನಿಬಂಧನೆಯ ಉದ್ದೇಶವಾಗಿದೆ.

ಹೆಂಡತಿ ನ್ಯಾಯಾಲಯದ ಮೂಲಕ ಕಾನೂನು ರಕ್ಷಣೆ, ಬೇರ್ಪಡುವಿಕೆ ಆದೇಶ ಅಥವಾ ಪತಿಯ ಮೇಲೆ ಉತ್ತಮ ನಡವಳಿಕೆಯ ಬಾಂಡ್ ವಿಧಿಸುವಂತೆ ಮನವಿ ಮಾಡಬಹುದು. ಪತಿ ಶಾಂತಿಯುತವಾಗಿ ಮದ್ಯಪಾನ ಮಾಡಿ ಯಾವುದೇ ರೀತಿಯ ಹಿಂಸೆ ಅಥವಾ ಕಿರುಕುಳಕ್ಕೆ ಕಾರಣವಾಗದಿದ್ದರೆ, ಈ ಸೆಕ್ಷನ್ ಅನ್ವಯಿಸುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಈ ಕಾನೂನು ಮದ್ಯಪಾನವನ್ನು ಸಂಪೂರ್ಣ ನಿಷೇಧಿಸುವುದಕ್ಕೆ ಅಲ್ಲ, ಕೌಟುಂಬಿಕ ಹಿಂಸಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ರೂಪಿಸಲಾಗಿದೆ. ಹೊಸ ವರ್ಷಕ್ಕೂ ಮುನ್ನ ಈ ವಿಷಯ ವೈರಲ್ ಆಗಿದ್ದು, “ಇನ್ನೂ ಕುಡಿಯುವ ಮುನ್ನ ಗಂಡಸರು ಹೆಂಡತಿಯ ಅನುಮತಿ ಪಡೆಯಬೇಕಾಗಬಹುದು” ಎಂಬ ತಮಾಷೆಯ ಮಾತುಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Join WhatsApp

Join Now

RELATED POSTS